ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ೧೬ ವರ್ಷ ಸೇವೆ ಸಲ್ಲಿಸಿ ಇದೀಗ ಕುಶಾಲನಗರದ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾದ ಮುಖ್ಯ ಶಿಕ್ಷಕರಾದ ಸಣ್ಣಸ್ವಾಮಿ ಅವರನ್ನು ಇಲ್ಲಿನ ಎಸ್.ಡಿ.ಎಂ.ಸಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾಗೇಂದ್ರ ಮತ್ತು ಸದಸ್ಯ ರು ಹಾಗೂ ಎಸ್.ಡಿ.ಎಂ.ಸಿ.ಯ ಮಾಜಿ ಅಧ್ಯಕ್ಷರಾದ ಬಿ.ಎನ್. ಕಾಶಿ, ಕೆ.ಎನ್. ಚಂದ್ರಶೇಖರ್, ಬಿ.ಎಸ್. ಧನಪಾಲ್, ನಾರಾಯಣ, ರಾಮಕೃಷ್ಣ ಮತ್ತು ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.ಐಗೂರು: ಐಗೂರು ಸರಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ. ಪೋಷಕ ಮತ್ತು ಶಿಕ್ಷಕರ ಸಭೆ ನಡೆಯಿತು. ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಎಸ್.ಎನ್. ಯೋಗೇಶ್ ವಹಿಸಿದ್ದರು. ಪ್ರಾಂಶುಪಾಲರಾದ ಉಮೇಶ್ ಮಾತನಾಡಿ, ಶಾಲೆಗೆ ಯಾವುದೇ ಸರಕಾರಿ ಅನುದಾನ ಬಂದರೂ ಸದ್ಬಳಕೆ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಗಿದೆ.ಬೆಳಿಗ್ಗೆ ಮತ್ತು ಸಂಜೆ ಸೇರಿ ಒಟ್ಟು ಹೆಚ್ಚುವರಿ ೨ಗಂಟೆ ಅವಧಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದು ಪೋಷಕರ ಸಹಕಾರ ಅಗತ್ಯವಾಗಿದೆ ಎಂದರು.

ಎಸ್.ಎನ್. ಯೋಗೇಶ್ ಮಾತನಾಡಿ ಹೆಚ್ಚುವರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾತಿಯಾದರೆ ಕಾಲೇಜಿನಲ್ಲಿ ಕಾಮರ್ಸ್ ವಿಭಾಗವನ್ನು ಪ್ರಾರಂಭಿಸಬಹುದೆAದರು. ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಿತು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರೆ ಕೃಷ್ಣಪ್ಪ ವಂದಿಸಿದರು .ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಯೋಗೇಶ್, ಶ್ವೇತಾ, ಮತ್ತು ಅಧ್ಯಾಪಕ ಮತ್ತು ಪೋಷಕ ವೃಂದ , ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೊನ್ನಂಪೇಟೆ: ಪೊನ್ನಂಪೇಟೆಯ ಸಂತ ಅಂತೋಣಿ ವಿದ್ಯಾ ಸಂಸ್ಥೆಯಲ್ಲಿ ಬಿರ್ಸಾ ಮುಂಡಾರವರ ೧೫೦ನೇ ಜನ್ಮದಿನವನ್ನು ಬುಡಕಟ್ಟು ಜನಾಂಗದ ಹೆಮ್ಮೆಯ ದಿನ ವೆಂದು ಆಚರಿಸಲಾಯಿತು. ಬಿರ್ಸಾ ಮುಂಡಾರವರ ಭಾವಚಿತ್ರಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಶಿಕ್ಷಕಿ ರಶ್ಮಿ ದೇವಯ್ಯ ಬಿರ್ಸಾಮುಂಡ ಅವರ ಕುರಿತು ಮಾಹಿತಿ ನೀಡಿದರು.ಮೂರ್ನಾಡು: ಮೂರ್ನಾಡುವಿನ ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು, ಎಂ.ರವಿ ಚೀಯಣ್ಣ, ಉಪಾಧ್ಯಕ್ಷ ಬೆಲ್ಲು ಚಿಣ್ಣಪ್ಪನವರು, ಮೂರ್ನಾಡು ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಉಷಾ ಶಾಲೆಯ ಮುಖ್ಯೋಪಾಧ್ಯಾಯಿನಿ ಶಿಲ್ಪಾ ಪೊನ್ನಮ್ಮ, ಸ್ಕೌಟ್ ಮತ್ತು ಗೈಡ್ ಮಾಸ್ಟರ್ ಹಿಮಾಲಯ ವುಡ್ ಬ್ಯಾಡ್ಜ್ ಹೋಲ್ಡರ್ ಗುಲ್ಶನ್ ಹಾಗೂ ಮೂರ್ನಾಡು ಕ್ಲಸ್ಟರ್‌ಗೆ ಒಳಪಡುವ ೧೯ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಯಾಮಿನಿ ನಿರೂಪಿಸಿದರು.

ಮಡಿಕೇರಿ : ಕುಶಾಲನಗರ ಸಮೀಪದ ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಸಂಭ್ರಮದಿAದ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅಂತರರಾಷ್ಟಿçÃಯ ಮಟ್ಟದ ಖೋಖೋ ಕ್ರೀಡಾಪಟು ಚೈತ್ರ ಬಿ. ಮಾತನಾಡಿ, ಸಾಧನೆ ಮಾಡುವಾಗ ಅಡೆತಡೆ ಎದುರಾಗುವುದು ಸಹಜ, ಅವುಗಳನ್ನೆಲ್ಲ ಮೀರಿ ಗುರಿ ಸಾಧನೆಯ ಕಡೆಗೆ ಸಾಗಬೇಕು. ವಿದ್ಯಾರ್ಥಿಗಳಲ್ಲಿರುವ ಕ್ರೀಡಾಸಕ್ತಿಯನ್ನು ಶಿಕ್ಷಕರು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಶಿಕ್ಷಣದ ಜೊತೆಗೆ ಕ್ರೀಡೆ ಕೂಡ ಜೀವನದಲ್ಲಿ ಬಹಳ ಮುಖ್ಯವಾಗಿದೆ ಎಂದರು.

ಜ್ಞಾನಗಂಗಾ ವಸತಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ.ಸುಧೀರ್ ಅವರು ಮಾತನಾಡಿ ಆರೋಗ್ಯವೇ ಭಾಗ್ಯ, ಉತ್ತಮ ಆರೋಗ್ಯ ಮತ್ತು ದೈಹಿಕ ಸದೃಢತೆ ನಮ್ಮದಾಗಬೇಕಾದರೆ ಕ್ರೀಡೆ ಅತೀ ಅವಶ್ಯಕ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ದಿನಗಳಲ್ಲಿ ಮಕ್ಕಳು ಟಿವಿ ಮತ್ತು ಮೊಬೈಲ್‌ಗಳಲ್ಲಿ ಬರುವ ಆಟಗಳನ್ನು ಹೆಚ್ಚೆಚ್ಚು ಆಡುತ್ತಾರೆ. ಇಂತಹ ಆಟಗಳನ್ನು ಆಡುವುದರಿಂದ ಮಕ್ಕಳ ಮಾನಸಿಕ ಆರೋಗ್ಯ ಕುಗ್ಗುತ್ತದೆ. ಮೈದಾನದಲ್ಲಿ ಆಡುವ ಕ್ರೀಡೆಗಳಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮೈದಾನದ ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಕರೆ ನೀಡಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ ಅವರು ಮಾತನಾಡಿ ಮನುಷ್ಯನಿಗೆ ಉತ್ತಮ ಆರೋಗ್ಯ ಸಿಗಬೇಕಾದರೆ ಮನಸ್ಸಿಗೆ ಜ್ಞಾನ ಮತ್ತು ದೇಹಕ್ಕೆ ಕ್ರೀಡೆ ಅಗತ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಕ್ರೀಡೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಅನಂತ ಪದ್ಮನಾಭನ್, ಶೋಭಾ ಅನಂತ ಪದ್ಮನಾಭನ್, ಪ್ರಾಂಶುಪಾಲರಾದ ಸತ್ಯ ಸುಲೋಚನ ಎಸ್.ಎಂ, ಉಪ ಪ್ರಾಂಶುಪಾಲರಾದ ಸಿ.ಕೆ.ನಾಗರಾಜ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಸೋಮವಾರಪೇಟೆ: ಮಕ್ಕಳ ದಿನಾಚರಣೆ ಅಂಗವಾಗಿ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು. ಮಕ್ಕಳು ವ್ಯಾಪಾರಿಗಳ ಪಾತ್ರದಲ್ಲಿ ಪಾಲ್ಗೊಂಡು, ತಾವು ತಂದ ತಿಂಡಿ ತಿನಿಸು, ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡಿ, ಹಣ ಸಂಪಾದಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಶಿಕ್ಷಕಿ ಆಶಾ, ಮಕ್ಕಳ ದಿನವನ್ನು ಪಾಠಶಾಲೆಯ ಪಠ್ಯಕ್ಕೆ ಮಾತ್ರ ಸೀಮಿತಗೊಳಿಸದೇ, ಮಕ್ಕಳಲ್ಲಿ ಜೀವನ ಕೌಶಲ್ಯಗಳನ್ನು ಬೆಳೆಸುವ ರೀತಿಯಲ್ಲಿ ಆಚರಿಸುವುದೇ ನಮ್ಮ ಉದ್ದೇಶ. ಮಕ್ಕಳ ಸಂತೆ ಎಲ್ಲರಿಗೂ ಹರ್ಷ ನೀಡುತ್ತಿದೆ. ಮಕ್ಕಳು ತಮ್ಮ ಕೈಚಳಕ, ಭಾವನೆ ಮತ್ತು ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸುತ್ತಿದ್ದು, ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ.ಗೋಪಾಲಕೃಷ್ಣ, ಎಸ್‌ಡಿಎಂಸಿ ಉಪಾಧ್ಯಕ್ಷೆ ದಿವ್ಯ, ಸದಸ್ಯರುಗಳಾದ ಆರೀಫ್, ಗಾನವಿ, ಫಾತಿಮಾ, ಸತ್ಯ, ಸರಸ್ವತಿ ಸಹ ಶಿಕ್ಷಕರಾದ ಸವಿತಾ, ಮೋಹನಕುಮಾರಿ, ಪಲ್ಲವಿ ಹಾಗೂ ಪೋಷಕರು ಇದ್ದರು. ಮಕ್ಕಳಿಂದ ನೃತ್ಯ, ಹಾಡು ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಶನಿವಾರಸಂತೆ: ಶನಿವಾರಸಂತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು; ಪೋಷಕರು, ಪ್ರತಿಯೊಬ್ಬರು ಶಾಲಾಭಿವೃದ್ಧಿಗೆ ಉದಾರ ಮನಸ್ಸಿನಿಂದ ಕೈಜೋಡಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲೆಯ ಸಭಾಂಗಣದಲ್ಲಿ ನಡೆದ ಪೋಷಕ ಮತ್ತು ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನಾಧಿಕಾರಿ ಕಾಂತರಾಜ್ ಮಾತನಾಡಿ, ಶತಮಾನ ಪೂರೈಸಿರುವ ಶಾಲೆ ಪ್ರಗತಿ ಸಾಧಿಸುತ್ತಿದೆ. ಸಮುದಾಯ ಈ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ಸಭೆಯ ಮೊದಲ ಅಧಿವೇಶನದಲ್ಲಿ ಶಿಕ್ಷಕಿ ಮಮತಾ, ಬುನಾದಿ ಸಾಕ್ಷರತೆ, ಸಂಖ್ಯಾ ಜ್ಞಾನ, ಎಫ್.ಎಲ್.ಎನ್. ಹಾಗೂ ಎಲ್.ಬಿ.ಎ.ಬಗ್ಗೆ ಹಾಗೂ ಸರ್ಕಾರದಿಂದ ಶಾಲೆಗೆ ಸಿಗುತ್ತಿರುವ ಸವಲತ್ತುಗಳ ಬಗ್ಗೆ ಚರ್ಚಿಸಿದರು.

ಎರಡನೇ ಅಧಿವೇಶನದಲ್ಲಿ ಶಿಕ್ಷಕಿ ರಜಿಯಾ, ಶಾಲಾಭಿವೃದ್ಧಿಯಲ್ಲಿ ಭಾಗಿದಾರರ ಪಾತ್ರ, ಸರಕಾರ ಪೋಷಕರ ಪ್ರತಿಭೆ ಗುರುತಿಸುವಿಕೆ ಮತ್ತು ಸಹಕಾರ ಪಡೆಯುವ ಕುರಿತು ಹಲವಾರು ವಿಚಾರಧಾರೆಗಳನ್ನು ಮಂಡಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚರಣ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಲಲಿತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್, ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಸಿ.ಶರತ್ ಶೇಖರ್, ಸರೋಜಾಶೇಖರ್, ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್, ಶಿಕ್ಷಕರು ಹಾಜರಿದ್ದರು. ಶಿಕ್ಷಕಿ ಜೆಸಿಂತಾ ಸಿಕ್ವೇರಾ ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ೧೫೦ಕ್ಕೂ ಅಧಿಕ ಪೋಷಕರು ಪಾಲ್ಗೊಂಡಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು. ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪೋಷಕರು ಬಹುಮಾನಗಳನ್ನು ಗಳಿಸಿದರು.ಐಗೂರು: ಕೇಂದ್ರ ಸಾಹಿತ್ಯ ವೇದಿಕೆ, ರಿ. ಬೆಂಗಳೂರು, ಸೋಮವಾರಪೇಟೆ ತಾಲೂಕು ಘಟಕ ಇವರ ಆಶ್ರಯದಲ್ಲಿ ಐಗೂರಿನ ಸರ್ಕಾರಿ ಪ. ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕವನವಾಚನ ,ಭಾವಗೀತೆ ಸ್ಪರ್ಧಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿ ಜಿಲ್ಲಾ ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಮುರುಳಿಧರ್ ಮಾತನಾಡಿ ರಾಷ್ಟçಪತಿ ಡಾ. ಅಬ್ದುಲ್ ಕಲಾಂ ಮನೆ ಮನೆ ಗಳಿಗೆ ಪತ್ರಿಕೆಗಳನ್ನು ಹಂಚಿದ ವ್ಯಕ್ತಿಯಾಗಿದ್ದರು. ಪತ್ರಿಕೆಗಳನ್ನು ಓದುವ ವ್ಯಕ್ತಿಗಳಾಗಬೇಕು ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ್ ಮಾತನಾಡಿ ವಿದ್ಯಾರ್ಥಿಗಳು ತಂದೆ, ತಾಯಿ ಗುರುಗಳಿಗೆ ಗೌರವ ನೀಡಿ ಎಂದರು. ಐಗೂರು ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಮಾತನಾಡಿ ಐಗೂರಿನಲ್ಲಿ ಈ ಬಾರಿಯ ತಾಲೂಕು ಸಾಹಿತ್ಯ ಪರಿಷತ್ತಿನ ಸಮ್ಮೇಳನವು ನಡೆಯಲಿದ್ದು ಎಲ್ಲರೂ ಕೈಜೋಡಿಸಿ ಎಂದರು. ಅಧ್ಯಕ್ಷತೆ ವಹಿಸಿದ್ದ ಶರ್ಮಿಳಾ ರಮೇಶ್ ಮಾತನಾಡಿ ವಿದ್ಯಾರ್ಥಿಗಳು ಕವನಗಳನ್ನು ರಚಿಸಿ ಸ್ಥಳೀಯ ಪತ್ರಿಕೆಗಳಿಗೆ ನೀಡಿದರೆ ಅದು ಪ್ರಕಟಗೊಳ್ಳುತ್ತದೆ ಎಂದರು.

ಈ ಸಂದರ್ಭದಲ್ಲಿ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಮುರುಳಿಧರ್, ಕವನ್ ಕಾರ್ಯಪ್ಪ, ಡಿ.ಪಿ .ಲೋಕೇಶ್ ಮತ್ತು ಸುಕುಮಾರ್ ಪತ್ರಕರ್ತರ ಪ್ರಶಸ್ತಿಗೆ ಆಯ್ಕೆಯಾದ ಬಗ್ಗೆ ಮು. ಶಿ. ಯಶ್ವಂತ್ ಮೆಚ್ಚುಗೆ ವ್ಯಕ್ತಪಡಿಸಿದರು.ಇತ್ತೀಚೆಗೆ ನಿಧನರಾದ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ , ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕ ಯಶ್ವಂತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ. ತಾಲೂಕು ಸಾಹಿತ್ಯ ಪರಿಷತ್ತಿನ ವೇದಿಕೆಯ ಅಧ್ಯಕ್ಷೆ ಅಧ್ಯಕ್ಷ ಶರ್ಮಿಳಾ ರಮೇಶ್, ಮುರುಳಿಧರ್, ರಕ್ಷಣಾ ವೇದಿಕೆ ಅಧ್ಯಕ್ಷ ದೀಪಕ್, ಐಗೂರ್ ಘಟಕದ ಅಧ್ಯಕ್ಷ ನಂಗಾರ್ ಕೀರ್ತಿ ಪ್ರಸಾದ್, ಪದಾಧಿಕಾರಿಗಳಾದ ಪದ್ಮಾವತಿ, ಜಾನಪದ ಪರಿಷತ್ತಿನ ಕೆ.ಎ .ಪ್ರಕಾಶ್, ವಸಂತ್, ಹಾನಗಲ್ ಸುಶೀಲ, ಗಣೇಶ್, ಶಾಲಾ ಶಿಕ್ಷಕ ವೃಂದ ದವರು ಭಾಗವಹಿಸಿದ್ದರು.

ವೀರಾಜಪೇಟೆ: ವೀರಾಜಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಾಯಮುಡಿ ವಲಯದ ಮಾಯಮುಡಿ ಕಾರ್ಯಕ್ಷೇತ್ರದ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ÷್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೈದ್ಯರಾದ ಡಾ. ಗಾನಶ್ರೀ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಹದಿ ಹರೆಯದ ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಮಾದಕ ವಸ್ತುಗಳ ಸೇವನೆಯಿಂದ ಕಾಯಿಲೆಗೆ ಒಳಗಾಗುತ್ತಿದ್ದಾರೆ ಹಾಗೂ ತಮ್ಮ ಓದಿನ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದ್ದಾರೆ.

ಅಮಲು ಪದಾರ್ಥಗಳ ಸೇವನೆಯನ್ನು ಕಂಡಲ್ಲಿ ಸಂಬAಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮಕ್ಕಳಿಗೆ ಮನವರಿಕೆ ಮಾಡಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವಾಣಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಲಯದ ಕೃಷಿ ಮೇಲ್ವಿಚಾರಕರಾದ ವಸಂತ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಸ್ವಾಸ್ಥ÷್ಯ ಸಂಕಲ್ಪದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಸಿಎಸ್‌ಸಿ ನೋಡಲ್ ಅಧಿಕಾರಿ ಚೇತನ್, ಸೇವಾ ಪ್ರತಿನಿಧಿ ಪುಷ್ಪ, ಚಾಂದಿನಿ, ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮಡಿಕೇರಿ: ಮಡಿಕೇರಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಣಿ ಅಬ್ಬಕ್ಕ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಭಾಗ ಸಹಯೋಗದಲ್ಲಿ ಅಬ್ಬಕ್ಕ @೫೦೦ ಪ್ರೇರಣದಾಯಿ ಉಪನ್ಯಾಸಗಳ ಸರಣಿ - ಎಸಳು ೯೧ ವಿಷಯದ ಬಗ್ಗೆ ಸಂಸ್ಥೆಯ ತರಬೇತಿದಾರರಿಗೆ ಉಪನ್ಯಾಸ ನಡೆಯಿತು. ಕಾರ್ಯಕ್ರಮವನ್ನು ವಕೀಲ ಎಂ.ಎಸ್ ಜಯಚಂದ್ರ ಉದ್ಘಾಟಿಸಿದರು.

ಉಪನ್ಯಾಸಕಿ ಮಮತಾ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಶರಣ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ರಾಣಿ ಅಬ್ಬಕ್ಕ ಅವರ ದಿಟ್ಟತನ ಹಾಗೂ ಪೋರ್ಚುಗೀಸರ ವಿರುದ್ಧ ಮಂಗಳೂರು ಕಾರವಾರ, ಉಲ್ಲಾಳ ಭಾಗದಲ್ಲಿ ಅವರು ನಡೆಸಿದ ಸಮರದ ಬಗ್ಗೆ ವಿವರವಾಗಿ ಮಾಹಿತಿ ಇತ್ತರು. ಮುಖ್ಯ ಅತಿಥಿಗಳಾಗಿ ಯೋಗ ಶಿಕ್ಷಕರಾದ ಮಹೇಶ್ ಕೆ.ಕೆ ಭಾಗವಹಿಸಿದ್ದರು. ಸಂಸ್ಥೆಯ ಪ್ರಬಾರ ಪ್ರಾಂಶುಪಾಲರಾದ ಸಿ.ಕೆ ಇಂದ್ರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ತರಬೇತಿದಾರರು ಭಾಗವಹಿಸಿದ್ದರು. ಉಪನ್ಯಾಸಕ ಜಿ.ಕೆ ಸೂರ್ಯನಾರಾಯಣ ಸ್ವಾಗತಿಸಿದರು. ಉಪನ್ಯಾಸಕಿ ದೀಪಾ ರಾಣಿ ಜಿ.ಎಸ್ ಅವರು ನಿರೂಪಿಸಿ, ವಂದಿಸಿದರು.ಕೂಡಿಗೆ: ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಭೋದನಾ ಅರಿವಿನ ಜೊತೆಯಲ್ಲಿ ವ್ಯಾವಹಾರಿಕ ಜ್ಞಾನ ಅರಿವು ಮೂಡಿದಾಗ ಉನ್ನತ ವ್ಯಾಸಂಗದ ನಂತರ ತಮ್ಮ ಬದುಕಿಗೆ ಸ್ವ ಉದ್ಯೋಗ ಆರಂಭಿಸಿಕೊಳ್ಳಲು ಪ್ರಾಥಮಿಕ ಹಂತದ ಮಕ್ಕಳ ಸಂತೆಯ ವ್ಯಾಪಾರ ವ್ಯವಹಾರದ ಮೂಲಕ ಜ್ಞಾನ ಹೆಚ್ಚಾಗುವುದು ಎಂದು ಕೂಡಿಗೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕೂಡಿಗೆ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶಾಲೆಯ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಅಯೋಚಿಸಲಾಗಿದ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಮಾತಾನಾಡಿದರು.

ಶಾಲೆಯ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಬೆಳೆದ ತರಕಾರಿ, ವಿವಿಧ ಬಗೆಯ ಹಣ್ಣುಗಳು , ನಿಂಬೆಹಣ್ಣಿನ ಜ್ಯೂಸ್, ಪಾನಿಪೂರಿ, ಗೆಣಸು, ಸೇರಿದಂತೆ ಅನೇಕ ವಸ್ತುಗಳ ಮಾರಾಟದಲ್ಲಿ ವಿದ್ಯಾರ್ಥಿಗಳು ತೊಡಗಿದರು. ಸಮೀಪದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ,ಶಾಲಾ ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿಗಳಿಂದ ಖರೀದಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಯೋಗೇಶ್, ಸಹ ಶಿಕ್ಷಕರಾದ ನಾಗರಾಜ್, ಶೈಲಜಾ, ನೇತ್ರಾವತಿ, ತಾರಾಮಣಿ, ಶಿವಶಂಕರ್, ಶಶಿಕಲಾ, ಸುಮಾ, ರೂಪ, ಸವಿತ, ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ವ್ಯಾಪಾರದಲ್ಲಿ ತೊಡಗಿದರು.ಕುಶಾಲನಗರ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕುಶಾಲನಗರ ಮೌಲಾನ ಅಜಾದ್ ಮಾದರಿ ಶಾಲೆಯ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಅರಿವು ಸಪ್ತಾಹ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು ಸ್ವಾತಂತ್ರ‍್ಯ ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವರಾಗಿದ್ದರು. ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಮೌಲಾನಾ ಅಜಾದ್ ರವರು ೧೯೪೭ ರ ಆಗಸ್ಟ್ ೧೫ ರಿಂದ ೧೯೫೮ ರ ಫೆಬ್ರುವರಿ ೨ ರವರೆಗೆ ಸೇವೆ ಸಲ್ಲಿಸಿದ್ದರು.ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು ಈ ದೇಶದ ಒಬ್ಬ ಸ್ಕಾಲರ್ ಆಗಿಯೂ ಮತ್ತು ಸ್ವಾತಂತ್ರ‍್ಯ ಚಳುವಳಿಯ ಹೋರಾಟಗಾರರಾಗಿಯೂ ಸಕ್ರಿಯರಾಗಿದ್ದರು ಎಂದು ಹೇಳಿದರು.

ಕೂಡಿಗೆ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕಿ ಪುಷ್ಪ ಮಾತನಾಡಿ, ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಅವರ ಜನ್ಮದಿನವನ್ನು ರಾಷ್ಟಿçÃಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಈ ಸಂದರ್ಭ ಮೌಲಾನ ಅಜಾದ್ ಮಾದರಿ ಶಾಲೆಯ ಮುಖ್ಯ ಶಿಕ್ಷಕಿ ಎಂ.ಎಸ್. ಶ್ವೇತ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವಿಶ್ವನಾಥ್, ಊರ್ದು ಶಾಲೆ ಶಿಕ್ಷಕ ಜಂಶಿದ್ ಅಹಮದ್ ಖಾನ್, ಮೌಲಾನ ಅಜಾದ್ ಶಾಲೆಯ ಶಿಕ್ಷಕರಾದ ಕೆ.ಸಿ. ಅನಿತಾ ಸೂರಜ್, ಮಂಜುನಾಥ್, ಕಾರ್ತಿಕ್, ಫಿಲಿಪ್, ಸಫ್ರಿನಾ, ರಂಗಸ್ವಾಮಿ, ದಿವ್ಯಾ, ಸಾಗರ್ ಪಾಲ್ಗೊಂಡಿದ್ದರು. ನಂತೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.

ವೀರಾಜಪೇಟೆ: ವೀರ ವನಿತೆ ಅಬ್ಬಕ್ಕಳ ಚರಿತ್ರೆಯನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ವನವಾಸಿ ಕಲ್ಯಾಣ, ಕರ್ನಾಟಕ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮಂಗಳೂರು ವಿಭಾಗ ಮತ್ತು ಕಾವೇರಿ ಕಾಲೇಜು, ವಿರಾಜಪೇಟೆ ಇವರ ಜಂಟಿ ಆಶ್ರಯದಲ್ಲಿ ನಡೆದ ಅಬ್ಬಕ್ಕ@೫೦೦ ಪ್ರೇರಣಾದಾಯಿ ೧೦೦ ಉಪನ್ಯಾಸಗಳ ಸರಣಿ- ಎಸಳು ೯೧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಇತಿಹಾಸ ನೋಡಿದಾಗ ಕೇವಲ ಪರಕೀಯರ ದಾಳಿ ಅವರ ಆಳ್ವಿಕೆಯನ್ನು ವೈಭವೀಕರಿಸಿ ಹೇಳಲಾಗಿದೆ ಹೊರತು ಸ್ಥಳೀಯ ವೀರರ ಕುರಿತು ಮಾಹಿತಿ ನೀಡಲಾಗುತಿಲ್ಲ. ನಮ್ಮ ದೇಶದ ಮೇಲೆ ದಾಳಿ ನಡೆಸಿ ಆಕ್ರಮಣ ಮಾಡಿಕೊಂಡು ಆಡಳಿತವನ್ನು ನಡೆಸಿದ ಮೊಘಲರಿಂದ ಹಿಡಿದು ಬ್ರಿಟಿಷರವರೆಗಿನ ಎಲ್ಲಾ ಇತಿಹಾಸವನ್ನು ನಾವು ತಿಳಿದುಕೊಳ್ಳುತ್ತೇವೆ. ಇದಕ್ಕೆ ಕಾರಣ ಬ್ರಿಟಿಷರು ಶೈಕ್ಷಣಿಕವಾಗಿ ದೈಹಿಕ ಮತ್ತು ಮಾನಸಿಕ ಗುಲಾಮರನ್ನಾಗಿ ಮಾಡಿಕೊಂಡದ್ದು. ಆದರೆ ಸ್ಥಳೀಯವಾಗಿ ಹೋರಾಟವನ್ನು ನಡೆಸಿದ ವೀರರ ಮೇಲೆ ನಮ್ಮ ಇತಿಹಾಸ ಹೆಚ್ಚಾಗಿ ಬೆಳಕು ಚೆಲ್ಲುತ್ತಿಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬೆಂಜನಪದವು ಕೆನರಾ ಇಂಜಿನಿಯರಿAಗ್ ಕಾಲೇಜಿನ ಪ್ರಾಧ್ಯಾಪಕರು ಮತ್ತು ಡೀನ್ ಪ್ರೊ. ಉದಯ ಕುಮಾರ್ ಶೆಣೈ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅಬ್ಬಕ್ಕ ಬಹಳ ಚರ್ಚಿತಳಾಗುತ್ತಿದ್ದಾಳೆ. ಇಂತಹವರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ಬಹಳ ಅಗತ್ಯ ಎಂದರು.

ಕೆಆರ್‌ಎAಎಸ್‌ಎಸ್ ರಾಜ್ಯ ಪ್ರಧಾನ ಜಂಟಿ ಕಾರ್ಯದರ್ಶಿ ಡಾ. ಮಾಧವ ಎಂ.ಕೆ ಮಾತನಾಡಿದರು. ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಆರ್‌ಎಂಎಸ್‌ಎಸ್ ಸಂಯೋಜಕಿ ಜಯಲಕ್ಷಿ÷್ಮ ಆರ್ ಶೆಟ್ಟಿ, ಕುಟ್ಟಂಡ ಪ್ರಿನ್ಸ್ ಗಣಪತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಆಡಳಿತಾತ್ಮಕ ಸಿಬ್ಬಂದಿಗಳು ಹಾಜರಿದ್ದರು.