ಸೋಮವಾರಪೇಟೆ,ನ.೧೭: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಆಶ್ರಯದಲ್ಲಿ, ಸೋಮವಾರಪೇಟೆ ತಾಲೂಕು ಘಟಕ ಮತ್ತು ಜಿಲ್ಲಾ ಯುವ ಘಟಕದ ನೇತೃತ್ವದಲ್ಲಿ ಸಮೀಪದ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ದೊಡ್ಡವೀರರಾಜೇಂದ್ರ ಒಡೆಯರ್ ಕ್ರೀಡಾಕೂಟ ನಡೆಯಿತು.

ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಗೌಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಿಂದ ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತರಲಾಯಿತು. ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾ ಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ ವಹಿಸಿದ್ದರು. ಈ ಸಂದರ್ಭ ಡಿವೈಎಸ್‌ಪಿ ಪಿ. ಚಂದ್ರಶೇಖರ್, ಮಹಾಸಭಾದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಕೆ.ಪಿ. ಆದರ್ಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮೋಕ್ಷಿಕ್‌ರಾಜ್, ಮ್ಯಾರಥಾನ್ ಓಟಗಾರ ಟಿ.ಜಿ. ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ, ೧ ರಿಂದ ೪ನೇ ತರಗತಿ ವಿದ್ಯಾರ್ಥಿಗಳ ಬಾಲಕಿಯರ ವಿಭಾಗದಲ್ಲಿ ಸ್ಟಿಕ್ಕರ್ ಅಂಟಿಸುವುದು, ಬಾಲಕರಿಗೆ ಒಂಟಿ ಕಾಲಿನ ಓಟ, ೫ ರಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ ಬಲೂನ್ ರಕ್ಷಣೆ, ಗೋಣಿ ಚೀಲದ ಓಟ, ೮ ರಿಂದ ೧೦ನೇ ತರಗತಿ ವಿಭಾಗದಲ್ಲಿ ನಿಂಬೆ ಚಮಚ ಓಟ, ೧೦೦ ಮೀಟರ್ ಓಟ, ಕಾಲೇಜು ವಿದ್ಯಾರ್ಥಿಗಳಿಗೆ ಟೆನ್ನಿಸ್ ಬಾಲ್ ಎಸೆತ, ಬಲೂನ್ ರಕ್ಷಣೆ, ೧೦೦ ಮೀಟರ್ ಓಟ, ಪುರುಷರಿಗೆ ಮತ್ತು ಮಹಿಳೆಯರಿಗೆ ೧೦೦ ಮೀಟರ್ ಓಟ, ಸಂಗೀತ ಕುರ್ಚಿ, ಬಕೇಟ್‌ಗೆ ಚೆಂಡು ಹಾಕುವುದು, ರಂಗೋಲಿ ಸ್ಪರ್ಧೆ, ಟೆನ್ನಿಸ್ ಬಾಲ್ ಕ್ರಿಕೆಟ್, ಹಗ್ಗಜಗ್ಗಾಟ, ಥ್ರೋಬಾಲ್ ಸ್ಪರ್ಧೆಗಳು ನಡೆದವು.