ವೀರಾಜಪೇಟೆ, ನ. ೧೬: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಕನ್ನಡ ಭಾಷಾ ವಿಭಾಗದ ವತಿಯಿಂದ ಕರುನಾಡ ಸಂಭ್ರಮ ೨೦೨೫ರ ಅಂಗವಾಗಿ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಲೇಖಕ ಹಾಗೂ ವೀರಾಜಪೇಟೆ ಉಪ ಖಜಾನೆಯ ಅಧೀಕ್ಷಕ ಗಣೇಶ್ ನಿಲವಾಗಿಲು ಅವರ ಚಕ್ರವರ್ತಿ ನೆಪೋಲಿಯನ್ ಹಾಗೂ ಹುಣಸೂರಿನ ಅರಸು ಕೃತಿಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವು ನಡೆಯಿತು. ವಿದ್ಯಾರ್ಥಿಗಳು ಲೇಖನದ ಕುರಿತ ಚರ್ಚೆಗಳಲ್ಲಿ ಭಾಗವಹಿಸಿ ಅನೇಕ ವಿಚಾರಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಲೇಖಕ ಗಣೇಶ್ ನಿಲವಾಗಿಲು ಅವರು, ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳನ್ನು ಓದಬೇಕು. ಪುಸ್ತಕಗಳನ್ನು ಓದುವುದರ ಮೂಲಕ ಇತರರಿಗೆ ಜ್ಞಾನವನ್ನು ನೀಡಬೇಕು ಎಂದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸರಸ್ವತಿ ಡಿ.ಕೆ. ಅವರು ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಾಹಿತ್ಯವು ಜೀವನದ ಗತಿಬಿಂಬ ಮತ್ತು ಪ್ರತಿಬಿಂಬವಾಗಿದೆ. ನಿತ್ಯವೂ ನೂತನ ಅನುಭವಗಳನ್ನು ಆನಂದಿಸುವ ಮನುಷ್ಯನು ಅದನ್ನು ಕಟ್ಟುವ ಹಾಗೂ ಕೃತಿ ರಚಿಸುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿನಿಯರಾದ ಸುಹೈರ ಹಾಗೂ ಕೀರ್ತನ ಲೇಖಕರ ಕೃತಿಗಳನ್ನು ವಿಮರ್ಶಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜು ಕೆ., ಉಪನ್ಯಾಸಕ ಡಾ. ಪ್ರಭು ಡಿ., ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.