ಮಡಿಕೇರಿ, ನ. ೧೬: ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಕೆಳಭಾಗದಲ್ಲಿರುವ ಕೊಡವ ಸಮಾಜದ ಮಂದ್ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಈ ಜಾಗದಲ್ಲಿದ್ದ ಪುರಾತನ ಕಾಲದ ಬೃಹತ್ ಮರ ಕಳೆದ ಮಳೆ ಗಾಳಿಯ ಸಂದರ್ಭದಲ್ಲಿ ಧರಾಶಾಹಿಯಾಗಿದ್ದು, ನಂತರದಲ್ಲಿ ಈ ವಾರ ಸೇರಿದಂತೆ ಮಂದ್‌ನ ಕಟ್ಟೆಯನ್ನು ತೆರವು ಮಾಡಲಾಗಿದೆ. ಕೆಲ ದಿನಗಳ ಹಿಂದೆ ಅಜ್ಜಪ್ಪ ದೈವದ ಅನುಗ್ರಹದೊಂದಿಗೆ ಹೊಸದಾಗಿ ಗಿಡ ನೆಡಲು ಜಾಗ ಗುರುತಿಸುವುದರೊಂದಿಗೆ ಈ ಹಿಂದೆ ಇದ್ದ ಜಾಗದ ಅನತಿ ದೂರದಲ್ಲಿ ಸ್ಥಳ ನಿಗದಿ ಮಾಡಲಾಗಿದೆ. ಇದೀಗ ಈ ಸ್ಥಳದಲ್ಲಿ ಹೊಸದಾಗಿ ಅರಳಿ ಮರದ ಗಿಡ ನೆಡಲಾಗುತ್ತಿದೆ ಅಲ್ಲದೆ ಇದರ ಸುತ್ತಲೂ ಸುಮಾರು ಎರಡೂವರೆ ಅಡಿ ಎತ್ತರದ ಮಂದ್‌ನ ಕಟ್ಟೆ ನಿರ್ಮಾಣ ಹಾಗೂ ಇದನ್ನು ಸಂರಕ್ಷಿಸಲು ನೆಟ್ ಅಳವಡಿಸುವ ಕೆಲಸ ಪ್ರಾರಂಭಿಸಲಾಗಿದೆ.
ಮಂದ್‌ಗೆ ೩೦ ಸೆಂಟ್ ನಷ್ಟು ಜಾಗವಿದ್ದು ಗಿಡ ಹಾಗೂ ಕಟ್ಟೆಯ ಸುತ್ತ ರಕ್ಷಣೆಗೆ ನೆಟ್ ಅಳವಡಿಸಲಾಗುವುದು. ಒತ್ತಿನ ಜಾಗವನ್ನು ಸಮತಟ್ಟು ಮಾಡಿ ಮೈದಾನಕ್ಕೆ ತೆರಳಲು, ಮಕ್ಕಳಿಗೆ ಆಟವಾಡಲು ಅವಕಾಶ ಕಲ್ಪಿಸಲಾಗುವುದು. ಇದಕ್ಕೆ ಈ ಹಿಂದಿನAತೆ ಯಾವುದೇ ತೊಂದರೆ ಆಗದು ಎಂದು ಕೊಡುವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ತಿಳಿಸಿದ್ದಾರೆ.
ಹಿಂದೆ ಇದ್ದ ಹತ್ತಿ ಮರ ಎಷ್ಟು ದೊಡ್ಡದಾಗಿತ್ತೆಂದರೆ ತೆರವುಗೊಳಿಸಿರುವ ಇದರ ಬುಡ ಭಾಗವನ್ನು ಇನ್ನೂ ಈ ಸ್ಥಳದ ಒತ್ತಿನಲ್ಲೇ ಇಡಲಾಗಿದೆ. ರಂಬೆ ಕೊಂಬೆಗಳು ಸೇರಿದಂತೆ ಸುಮಾರು ೧೮ ಟಿಪ್ಪರ್ ಲೋಡ್ ನಷ್ಟು ಭಾಗವನ್ನು ಸಂಪಿಗೆಕಟ್ಟೆ ಬಳಿ ಇರುವ ಜಾಗದಲ್ಲಿ ಇರಿಸಲಾಗಿದೆ. ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಇದನ್ನು ಅಲ್ಲಿಗೆ ಸಾಗಿಸಲಾಗಿದೆ ಎಂದು ಮುತ್ತಪ್ಪ ಅವರು ತಿಳಿಸಿದ್ದಾರೆ.