ಶನಿವಾರಸಂತೆ, ನ. ೧೬: ಕೊಡಗು-ಹಾಸನ ಗಡಿಭಾಗ ಹೊಸೂರು ಗ್ರಾಮದಲ್ಲಿರುವ ೪೦೦ ವರ್ಷಗಳ ಇತಿಹಾಸವಿರುವ ಚೋಳರ ಕಾಲದ ಶ್ರೀ ಬೆಟ್ಟದ ಬಸವೇಶ್ವರ ಸ್ವಾಮಿಯ “ಕೌಟೇಕಾಯಿ ಜಾತ್ರಾ ಮಹೋತ್ಸವ’’ ತಾ. ೧೭ ರಂದು (ಇಂದು) ನಡೆಯಲಿದೆ.

ಗೊಬ್ಬರದ ರಾಶಿಯಲ್ಲಿ ಬೆಳೆಯುತ್ತಿದ್ದ ಕೌಟೇಕಾಯಿ ಕ್ರಿಮಿನಾಶಕವಾಗಿ ಸಾವಯವ ಗೊಬ್ಬರವಾಗುತ್ತಿತ್ತು. ಗೋವುಗಳಿಗೆ ಗಾಯವಾದಾಗ ಕೌಟೇಕಾಯಿ ರಸ ಹಚ್ಚಿ ಗುಣಪಡಿಸುತ್ತಿದ್ದರು. ಅಷ್ಟು ಮಾತ್ರವಲ್ಲದೇ ಕಾಯಿಯ ತಿರುಳು ತೆಗೆದು ಅದರಲ್ಲಿ ಎಣ್ಣೆಬತ್ತಿ ಇಟ್ಟು ದೀಪ ಬೆಳಗಿಸಿ ದೇವರ ಪೂಜೆ ಮಾಡುತ್ತಿದ್ದರು. ಕತ್ತಲಲ್ಲಿ ಬೆಳಕು ನೀಡಲು ಸೀಮೆಎಣ್ಣೆ ದೀಪವಾದರೆ, ದೇವರಿಗೆ ಕೌಟೆಕಾಯಿ ದೀಪ ಹಚ್ಚಿ ಪೂಜಿಸುತ್ತಿದ್ದರು.

ಚೋಳರ ಕಾಲದಿಂದ ಪೂಜಿಸಲ್ಪಟ್ಟ ಬಸವೇಶ್ವರ ದೇವರನ್ನು ಇಂದಿಗೂ ಗ್ರಾಮದ ವಿವಿಧ ಸಮುದಾಯದವರು ಮನೆ ದೇವರಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ದೇವಾಲಯದಲ್ಲಿ ೯ ಗಂಟೆಯಿAದ ಪೂಜೆ ನಡೆಯುತ್ತದೆ.

ದೀಪಾವಳಿ ಹಬ್ಬದಾಚರಣೆ ಮುಗಿದ ನಂತರ ಕೌಟೇಕಾಯಿ ಜಾತ್ರೆ ಹೊಸೂರು ಕಲ್ಲಪ್ಪನ ಹಳ್ಳಿ ಹಾಗೂ ತಡಕಲು ಗ್ರಾಮಗಳ ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಡೆಯುತ್ತದೆ. ಕೊಡಗು-ಹಾಸನ ಜಿಲ್ಲೆಯ ಜನರು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಜಾತ್ರೆಯ ದಿನ ಗ್ರಾಮ ಹಾಗೂ ದೇವಾಲಯವನ್ನು ಕೌಟೇಕಾಯಿಯಿಂದ ಅಲಂಕರಿಸುತ್ತಾರೆ. ಕೌಟೇಕಾಯಿ ರಾಶಿಯ ಮೇಲೆ ಹಣತೆ ಬೆಳಗಿಸಿ ಜಾತ್ರಾ ಸಮಾರಂಭವನ್ನು ಉದ್ಘಾಟಿಸಲಾಗುತ್ತದೆ.

ದೇವಾಲಯದಿಂದ ೨ ಕಿ.ಮೀ. ದೂರದ ಅಂಕಾಲ್ ದೀಣೆಗೆ ಬಸವೇಶ್ವರ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಪೂಜಿಸಿ ಪುನಃ ದೇವಾಲಯಕ್ಕೆ ತರಲಾಗುತ್ತದೆ. ಈ ಸಂದರ್ಭ ಯುವಕರು ಸಾಂಪ್ರದಾಯಿಕವಾಗಿ ಒಬ್ಬರಿಗೊಬ್ಬರು ಕೌಟೇಕಾಯಿ ಎಸೆದಾಡುತ್ತಾರೆ.ಗ್ರಾಮಸ್ಥರು ಬಹಳ ಶ್ರದ್ಧಾಭಕ್ತಿಯಿಂದ ಜಾತ್ರೆ ನಡೆಸುತ್ತಾರೆ.ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.

ಜಾತ್ರೆ ನಂತರ ೮ ದಿನಕ್ಕೆ ದೇವಾಲಯದಲ್ಲಿ ಕಾರ್ತಿಕ ಮಾಸದ ಪೂಜೆ ವಿಜೃಂಭಣೆಯಿAದ ನಡೆಯುತ್ತದೆ. ವೀಳ್ಯೆದೆಲೆ ಮೇಲೆ ೧೦೧ ದೀಪಗಳನ್ನಿಟ್ಟು ಅಲಂಕರಿಸಿ ದೀಪ ಬೆಳಗಿಸಿ ಪೂಜಿಸಲಾಗುತ್ತದೆ.

ದೇವಾಲಯ ಸಮಿತಿ ವತಿಯಿಂದ ತಾ.೧೭ ರಂದು ಬೆಳಿಗ್ಗೆ ೭ ಗಂಟೆಯಿAದ ಆರಂಭವಾಗುವ ಕೌಟೇಕಾಯಿ ಜಾತ್ರಾ ಸಮಾರಂಭದಲ್ಲಿ ೧೧ ಗಂಟೆಯಿAದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಶನಿವಾರಸಂತೆಯ ನಾಟ್ಯ ನಿಲಯಂ ನೃತ್ಯ ತರಬೇತಿ ಕೇಂದ್ರದವರಿAದ ನೃತ್ಯ ವೈಭವ, ಸಾಂಸ್ಕೃತಿಕ ರಸಮಂಜರಿ ನಡೆಯಲಿದೆ.ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಮುರಳಿಮೋಹನ್, ಮತ್ತಿತರ ಪ್ರಮುಖರು, ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ. ದಾನಿ ಹೃಷಿಕೇಶ್, ಉದ್ಯಮಿ ಬಾಚಳ್ಳಿ ಪ್ರತಾಪ್ ಗೌಡ ಹಾಗೂ ಉದ್ಯಮಿ ಮಧುಸೂದನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಶ್ರೀಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಟಿ.ಎಸ್. ಕಾಂತರಾಜ್, ಕಾರ್ಯದರ್ಶಿ ಎಚ್.ಕೆ. ರಮೇಶ್ ಹಾಗೂ ಖಜಾಂಚಿ ಕೆ.ಬಿ. ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.