ಚೆಯ್ಯಂಡಾಣೆ, ನ. ೧೬: ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ನವಂಬರ್ ೨೮ರಿಂದ ೩೦ ರವರೆಗೆ ತೃತೀಯ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್‌ನ ಕಾರ್ಯದರ್ಶಿ ವಿಲಿನ್ ಬೇಪಡಿಯಂಡ ತಿಳಿಸಿದ್ದಾರೆ.

ಕರಡ ಗ್ರಾಮದಲ್ಲಿರುವ ಕ್ಲಬ್‌ನ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕರಡ ಪ್ರಾಥಮಿಕ ಶಾಲಾ ಮೈದಾನದಲ್ಲಿ ೩ ದಿನಗಳ ಕಾಲ ಪಂದ್ಯಾಟ ನಡೆಯಲಿದ್ದು, ಪ್ರಥಮ ಬಾರಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ (ನಮ್ಮೆ) ಪಾಂಡAಡ ಕಪ್ ನಡೆದ ಹೆಗ್ಗಳಿಕೆಗೆ ಪಾತ್ರವಾಗಿರುವ ಕರಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುವ ತೃತೀಯ ವರ್ಷದ ಈ ಹಾಕಿ ಪಂದ್ಯಾವಳಿಯಲ್ಲಿ ಕಡಿಯತ್‌ನಾಡಿಗೆ ಒಳಪಟ್ಟ ಗ್ರಾಮಗಳು ಭಾಗವಹಿಸಲು ಅವಕಾಶವಿದ್ದು ಪಾಲ್ಗೊಳ್ಳುವ ತಂಡಗಳು ಹೆಸರನ್ನು ನೋಂದಾಯಿಸಬಹುದಾಗಿದೆ, ತಂಡಗಳ ಹೆಸರು ನೋಂದಾಯಿಸಲು ತಾ.೨೦ ಕಡೆ ದಿನವಾಗಿದೆ ಎಂದರು.

ಒಟ್ಟು ೯ ಜನ ಆಟಗಾರರು ಪಾಲ್ಗೊಳ್ಳುವ ತಂಡದಲ್ಲಿ ೩ ಜನ ಅತಿಥಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದ್ದು ೨೮ರಂದು ಬೆಳಿಗ್ಗೆ ೧೦.೩೦ಕ್ಕೆ ಪಂದ್ಯಾಟದ ಉದ್ಘಾಟನೆ ನಡೆಯಲಿದೆ. ೩೦ ರಂದು ಫೈನಲ್ ಪಂದ್ಯಾವಳಿ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

ತಂಡದ ಹೆಸರನ್ನು ನೋಂದಾಯಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. ಮೊ. ೯೪೮೩೬೩೦೩೫೨, ೯೬೮೬೪೪೫೭೭೯.

ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷರಾದ ಬೇಪಡಿಯಂಡ ಬಿದ್ದಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ, ಉಪಾಧ್ಯಕ್ಷರಾದ ಐತಿಚಂಡ ಭೀಮಯ್ಯ, ಕೋಶಾಧಿಕಾರಿ ಐತಿಚಂಡ ಪ್ರಕಾಶ್ ಕಾರ್ಯಪ್ಪ ಹಾಗೂ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.