ಕುಶಾಲನಗರ, ನ. ೧೩: ಕುಶಾಲನಗರ ಶ್ರೀ ಗಣಪತಿ ರಥೋತ್ಸವ ಅಂಗವಾಗಿ ಜಾತ್ರಾ ಮೈದಾನದಲ್ಲಿ ಗೋ ಪ್ರದರ್ಶನ ಮತ್ತು ಉತ್ತಮ ರಾಸುಗಳ ಆಯ್ಕೆ ಕಾರ್ಯಕ್ರಮ ನಡೆಯಿತು.

ಕುಶಾಲನಗರ ಸೇರಿದಂತೆ ಸುತ್ತಮುತ್ತ ಗ್ರಾಮಗಳಿಂದ ಹಾಗೂ ಪಿರಿಯಾಪಟ್ಟಣ ಅರಕಲಗೂಡು ತಾಲೂಕು ವ್ಯಾಪ್ತಿಯಿಂದ ಜಾನುವಾರುಗಳ ಮಾಲೀಕರು ತಮ್ಮ ರಾಸುಗಳನ್ನು ಹಿಂದಿನ ದಿನವೇ ಜಾತ್ರಾ ಮೈದಾನಕ್ಕೆ ತಂದು ಸ್ಪರ್ಧೆಗೆ ಅಣಿಯಾಗಿದ್ದರು.

ಪಶು ವೈದ್ಯಾಧಿಕಾರಿ ಡಾ. ಕೆ. ನಾಗರಾಜ್, ಡಾ. ಸತೀಶ್ ಕುಮಾರ್, ಡಾ. ಸಂಜೀವ್ ಕುಮಾರ್ ಆರ್. ಸಿಂಧೆ, ಡಾ. ಸಲೀಂ, ಡಾ. ಅಮೃತ, ಡಾ. ಅಮೀರ್ ಮತ್ತು ಸಿಬ್ಬಂದಿಗಳು ವಿವಿಧ ತಳಿಗಳ ರಾಸುಗಳ ಆಯ್ಕೆ ಪ್ರಕ್ರಿಯೆ ನಡೆಸಿದರು. ಲಕ್ಷಾಂತರ ಮೌಲ್ಯದ ಹೋರಿಗಳು, ಗೂಳಿಗಳು ಪ್ರದರ್ಶನದಲ್ಲಿ ಜನರ ಗಮನ ಸೆಳೆದವು.

ಹಸು ಕರುಗಳು ಎಮ್ಮೆ ಕೋಳಿ ಕುರಿ ಆಡು ನಾಯಿ ಮತ್ತಿತರ ಸಾಕು ಪ್ರಾಣಿಗಳು ಕೂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ದೇವಾಲಯ ಸಮಿತಿ ವತಿಯಿಂದ ಜಾನುವಾರುಗಳಿಗೆ ಮೇವು ವ್ಯವಸ್ಥೆ ಮತ್ತು ಅವುಗಳ ಮಾಲೀಕರಿಗೆ, ಸಹಾಯಕರಿಗೆ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೈದಾನಕ್ಕೆ ಭೇಟಿ ನೀಡಿದ ಮಡಿಕೇರಿ ಕ್ಷೇತ್ರ ಶಾಸಕ ಮಂತರ್ ಗೌಡ ಸ್ಪರ್ಧೆಯಲ್ಲಿ ಪಾಲ್ಗೊಂಡ ರೈತರು ಮತ್ತು ಜಾನುವಾರುಗಳ ಮಾಲೀಕರೊಂದಿಗೆ ಉಭಯ ಕುಶಲೋಪರಿ ನಡೆಸಿದರು. ಗಣಪತಿ ದೇವಾಲಯ ರಥೋತ್ಸವ ಅಂಗವಾಗಿ ಜಾನುವಾರುಗಳ ಪ್ರದರ್ಶನ ಮತ್ತು ಸ್ಪರ್ಧೆಗೆ ಅವಕಾಶ ನೀಡಿರುವುದು ಉತ್ತಮ ವಿಷಯವಾಗಿದೆ. ರೈತರುಗಳಿಗೆ ತಮ್ಮ ಜಾನುವಾರುಗಳನ್ನು ಪ್ರದರ್ಶನದ ಜೊತೆಗೆ ಮಾರಾಟಕ್ಕೆ ಕೂಡ ಅವಕಾಶ ದೊರೆಯುತ್ತದೆ. ಸ್ಪರ್ಧೆಗಿಂತ ಪಾಲ್ಗೊಳ್ಳುವುದು ಮುಖ್ಯ ಎಂದು ಹೇಳಿದರು.

ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ಸಹ ಕಾರ್ಯದರ್ಶಿ ಕೆ.ಎನ್. ದೇವರಾಜ್, ನಿರ್ದೇಶಕರಾದ ವಿ.ಪಿ. ಶಶಿಧರ್, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮತ್ತಿತರರು ಇದ್ದರು.