ಕಣಿವೆ, ನ. ೧೩: ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ರಾಶಿಗಟ್ಟಲೇ ಬಿದ್ದು ದುರ್ವಾಸನೆ ಬೀರುತ್ತಿದ್ದ ಕಸದ ರಾಶಿಯನ್ನು ಸ್ಥಳೀಯ ಗ್ರಾ.ಪಂ. ಆಡಳಿತ ಗುರುವಾರ ಸ್ವಚ್ಛಗೊಳಿಸುವ ಮೂಲಕ ‘ಶಕ್ತಿ’ಯಲ್ಲಿ ಪ್ರಸಾರಗೊಂಡ ಗ್ರಾಮ ದೇವತೆ ಹಬ್ಬಕ್ಕೆ ಕಸದ ಸ್ವಾಗತ ಎಂಬ ವರದಿಗೆ ಸ್ಪಂದನ ದೊರೆತಿದೆ.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಖುದ್ದು ಸ್ಥಳ ಪರಿಶೀಲನೆ ನಡೆಸಿ ಪಂಚಾಯಿತಿ ಪಿಡಿಓ ರವಿಕುಮಾರ್ ಅವರಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಕೂಡಲೇ ಕಸ ತೆರವುಗೊಳಿಸಿ ಹೆದ್ದಾರಿ ಸ್ವಚ್ಛತೆಗೆ ಕ್ರಮ ಜರುಗಿಸಿದ್ದಾರೆ.ಹಾಗಾಗಿ ತಾ. ೨೧ ರಂದು ಹೆಬ್ಬಾಲೆ ಗ್ರಾಮದಲ್ಲಿ ನಡೆಯುವ ಗ್ರಾಮದೇವತೆ ಹಬ್ಬಕ್ಕೆ ಬರುವ ಭಕ್ತರು ಮೂಗುಮುಚ್ಚದೇ ಈ ರಸ್ತೆಯಲ್ಲಿ ತೆರಳಬಹುದಾಗಿದೆ.