ಮಡಿಕೇರಿ, ನ. ೧೩: ಹೋರಾಟ ಮನೋಭಾವದ ಸಮಯ ಪ್ರಜ್ಞೆ ಮತ್ತು ಸ್ವಯಂ ರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರ ವಹಿಸಿರುವ ವೀರರಾಣಿ ಒನಕೆ ಓಬವ್ವ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳು ವಂತಾಗಬೇಕು ಎಂದು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಭಾಷಾ ಶಿಕ್ಷಕಿ ಬಿ.ಬಿ. ಹೇಮಲತ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ನಡೆದ ಕನ್ನಡ ನಾಡಿನ ವೀರನಾರಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಿತ್ರದುರ್ಗದ ಕೋಟೆಯ ರಕ್ಷಣೆಗೆ ಹೋರಾಡಿದ ವೀರರಾಣಿ ಒನಕೆ ಓಬವ್ವ ಅವರ ಹೋರಾಟದ ಜೀವನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು.

ಸಾಮಾನ್ಯ ಮಹಿಳೆಯಾಗಿ ಬದುಕುತ್ತಿದ್ದ ಒನಕೆ ಓಬವ್ವ ಶತ್ರುಗಳ ವಿರುದ್ಧ ಹೋರಾಡಿ ಜಯಗಳಿಸುತ್ತಾರೆ. ರಕ್ಷಣೆಗಾಗಿ ಒನಕೆ ಬಳಸುವ ಮೂಲಕ ಜಯ ಪಡೆಯುತ್ತಾರೆ ಎಂದು ಹೇಮಲತ ಅವರು ತಿಳಿಸಿದರು.

ವೀರ ವನಿತೆ ಒನಕೆ ಓಬವ್ವ ಅವರು ನಾಡಿಗೆ ನೀಡಿರುವ ಕೊಡುಗೆಯಿಂದ ಇಂದಿಗೂ ಸಹ ಪ್ರಸ್ತುತರಾಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷಿö್ಮಬಾಯಿ, ರಾಣಿ ಅಬ್ಬಕ್ಕ ಸೇರಿದಂತೆ ಹಲವು ಮಹಿಳಾ ಹೋರಾಟಗಾರರು ತಮ್ಮ ತಮ್ಮ ಪ್ರಾಂತ್ಯದಲ್ಲಿ ಶತ್ರುಗಳ ವಿರುದ್ಧ ಹೋರಾಡಿ ಜಯಸಾಧಿಸಿದ್ದಾರೆ.

ಓಬವ್ವ ಸಾಹಸ ತಿಳಿದು ಅಲ್ಲಿನ ಅರಸರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ದುರ್ಗದ ಕೋಟೆಯನ್ನು ರಕ್ಷಿಸಿದ ತಾಯಿ ಒನಕೆ ಓಬವ್ವ ಎಂದು ಶ್ಲಾಘಿಸುತ್ತಾರೆ ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಭಾರತ ಸ್ವಾತಂತ್ರö್ಯಕ್ಕೂ ಮೊದಲು ಆಯಾಯ ಪ್ರಾಂತ್ಯದಲ್ಲಿ ರಾಜ ಮಹಾರಾಜರು ಇತರರು ತಮ್ಮ ವ್ಯಾಪ್ತಿಯಲ್ಲಿ ಆಡಳಿತ ಮಾಡುತ್ತಾರೆ. ತಮ್ಮ ಪ್ರಾಂತ್ಯದ ರಕ್ಷಣೆಗಾಗಿ ಸದಾ ಮುಂದಾಗಿರುತ್ತಾರೆ. ಆ ನಿಟ್ಟಿನಲ್ಲಿ ಒನಕೆ ಓಬವ್ವ ಶತ್ರುಗಳ ಸಂಹಾರ ಮಾಡಿದ್ದಾರೆ. ಸಮಯ ಪ್ರಜ್ಞೆ ಮತ್ತು ಸಂದರ್ಭೋಚಿತವಾಗಿ ಸ್ವಯಂರಕ್ಷಣೆ ಮಾಡಿಕೊಳ್ಳುವತ್ತ ಮುಂದಾಗಿದ್ದು ಒನಕೆ ಓಬವ್ವ ಅವರ ಛಲ ವಿಶೇಷವಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಮಾತನಾಡಿ, ವೀರರಾಣಿ ಒನಕೆ ಓಬವ್ವ ಅವರು ಧೈರ್ಯ, ಸಾಹಸದಿಂದ ಶತ್ರುಗಳ ಸಂಹಾರಕ್ಕೆ ಮುಂದಾಗಿದ್ದರು. ಇವರ ಧೈರ್ಯ, ಸ್ಥೆöÊರ್ಯವನ್ನು ಮೆಚ್ಚಬೇಕಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಮಾತನಾಡಿ, ‘ವೀರರಾಣಿ ಒನಕೆ ಓಬವ್ವ ಅವರ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅವರಂತೆ ಹೋರಾಟದ ಮನೋಭಾವ ಇರಬೇಕು ಎಂದರು.