ಶನಿವಾರಸಂತೆ, ನ. ೧೨: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಕೋಡು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ, ಕುಂಬಾಭಿಷೇಕ, ಕಲಶರೋಹಣ ಕಾರ್ಯಕ್ರಮ ಭಾನುವಾರ ಮತ್ತು ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಭಾನುವಾರ ಸಂಜೆ ಗಂಗೆಪೂಜೆ, ಗೋಪೂಜೆ, ಯೋಗಶಾಲಾ ಪ್ರವೇಶ, ಪುಣ್ಯಾಹ ವಾಹನ, ನಾಂದಿ, ಗಣಪತಿ ಪೂಜೆ, ಮಂಟಪ ಪೂಜೆ, ಕಲಶ ಪ್ರತಿಷ್ಠಾಪನೆ, ಗಣಪತಿ ಹೋಮ, ವಾಸ್ತು, ರಾಕ್ಷೋಘ್ನ ಹೋಮ, ಅಷ್ಟಬಲಿ ಸಮರ್ಪಣಾ, ವಿಗ್ರಹ ಸಂಸ್ಕಾರ, ಪುಷ್ಪ ವಿವಾಸ, ಫಲಾಧಿವಾಸ, ನಿದ್ರಾದಿವಾಸ ಹಾಗೂ ತೀರ್ಥ-ಪ್ರಸಾದ ವಿನಿಯೋಗವಾಯಿತು.

ಸೋಮವಾರ ಬೆಳಿಗ್ಗೆ ಸುಮಂಗಲಿಯರಿಗೆ ಅಗ್ರೋಧಕ ಸಹಿತ ಗಂಗಾಪೂಜೆ, ಗ್ರಾಮದ ರಾಜಬೀದಿಯಲ್ಲಿ ಮೆರವಣಿಗೆ, ದೇವಾಲಯ ಪ್ರವೇಶ ನಂತರ ಬ್ರಾಹ್ಮೀ ಮುಹೂರ್ತದಲ್ಲಿ ನೂತನ ದೇವರ ಪ್ರತಿಷ್ಠಾಪನೆ ಹಾಗೂ ಸ್ಥವಿತ ಕಳಶಗಳ ಅವಾಹನೆ ನಡೆಯಿತು.

ನಂತರ ಶ್ರೀಸ್ವಾಮಿಗೆ ಪ್ರೀತ್ಯರ್ಥವಾಗಿ ರುದ್ರಹೋಮ, ನವಗ್ರಹ ಹೋಮ, ಕಾಲಕಲಶ ಹೋಮ, ಸ್ಥವಿತ ಕಲಶಗಳ ಹೋಮ, ಜಯಾಧಿಹೋಮ, ಮಹಾಪೂರ್ಣಾಹುತಿ, ದೃಷ್ಠಿಪೂಜೆ, ನಾಕಾಬಲಿ, ಮಹಾಮಂಗಳಾರತಿಯಾಗಿ ತೀರ್ಥ ಪ್ರಸಾದ ವಿನಿಯೋಗವಾಯಿತು.

ಪೂಜಾ ಕಾರ್ಯಕ್ರಮದ ನಂತರ ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ತಪೋವನ ಕ್ಷೇತ್ರ ಮನೆಹಳ್ಳಿಮಠದ ಮಹಾಂತಶಿವಲಿAಗ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಹೆಗ್ಗಡಹಳ್ಳಿ ಶಡ್ಭಾವ ರೈತೇಶ್ವರ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಆನಂತರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಆಚರಣೆಯಲ್ಲಿ ಯುವಕರು ಮುಂದಾಳತ್ವ ವಹಿಸಬೇಕು. ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯ ಸರ್ಕಾರದ ಅನುದಾನವಿಲ್ಲದೇ ಗ್ರಾಮಸ್ಥರ ಸಹಕಾರದಲ್ಲಿ ಆರೇ ತಿಂಗಳಲ್ಲಿ ಪುನರ್ ಪ್ರತಿಷ್ಠಾಪನೆಗೊಂಡಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲೂ ಗ್ರಾಮದ ಯುವಕರು ಇದೇ ರೀತಿ ಒಗ್ಗಟ್ಟಿನಿಂದ ಉತ್ಸಾಹದಿಂದ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಬೇಕು. ಶಾಸಕನಾಗಿ ಅಲ್ಲ; ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತೇನೆ ಎಂದರು.

ಕುಮಾರಲಿAಗೇಶ್ವರ ದೇವಸ್ಥಾನ ಸಮಿತಿ ಸದಸ್ಯ ವಿನಿತ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದಾಧಿಕಾರಿಗಳು, ಜನಪ್ರತಿನಿಧಿಗಳು, ಶನಿವಾರಸಂತೆ ಪೊಲೀಸ್ ಠಾಣೆ ಪಿಎಸ್‌ಐ ಹೆಚ್.ವೈ. ಚಂದ್ರ, ಗ್ರಾಮದ ಮುಖಂಡರು ಹಾಜರಿದ್ದರು. ನಿರಂತರ ಅನ್ನಸಂತರ್ಪಣೆ ನಡೆದು ಸಾವಿರಾರು ಮಂದಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.