ನಾಪೋಕ್ಲು, ನ. ೧೨: ಹದಿಹರೆಯದ ಮಕ್ಕಳು ದುಶ್ಚಟಕ್ಕೆ ಬಲಿಯಾಗಿ ಮಾದಕ ಕಾಯಿಲೆಗೆ ಒಳಗಾಗುತ್ತಿದ್ದಾರೆ ಎಂದು ಆಯುಷ್ಮಾನ್ ಇಲಾಖೆಯ ವೈದ್ಯ ಡಾ. ಚಂದನ್ ಆತಂಕ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ, ಮೂರ್ನಾಡು ವಲಯದ ಪಾರಣೆ ಕಾರ್ಯಕ್ಷೇತ್ರದ ವತಿಯಿಂದ ಪಾರಣೆ ಗ್ರಾಮದ ಸರಕಾರಿ ಪ್ರೌಢಶಾಲೆ ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಾಗಿ ಆಗಮಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾದಕ ವಸ್ತುಗಳಾದ ಗುಟ್ಕಾ ಸೇವನೆ, ಮದ್ಯಪಾನ, ಅಮಲು ಪದಾರ್ಥಗಳ ಸೇವನೆಯಿಂದ ಆರೋಗ್ಯಕ್ಕೆ ಮಾತ್ರವಲ್ಲದೇ ನಮ್ಮ ಪರಿವಾರಕ್ಕೂ ಹಾನಿ ಉಂಟಾಗುತ್ತದೆ. ಒಂದುವೇಳೆ ಯಾರಾದರೂ ವ್ಯಸನಕ್ಕೆ ಒಳಗಾದಲ್ಲಿ ಅಥವಾ ಈ ರೀತಿಯ ಅಮಲು ಪದಾರ್ಥಗಳ ಸೇವನೆಯನ್ನು ಕಂಡಲ್ಲಿ ಸಂಬAಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮಕ್ಕಳಿಗೆ ಮನವರಿಕೆ ಮಾಡಿದರು.

ವಲಯ ಮೇಲ್ವಿಚಾರಕರಾದ ಪ್ರತಾಪ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆಯಿಂದ ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಕಲಿಕೆಯ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಇದು ಅವರ ಭವಿಷ್ಯಕ್ಕೆ ಮಾರಕವೂ ಹೌದು. ಮಾದಕವಸ್ತು ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ಗೆ ಒಳಗಾದವರ ಪರಿಸ್ಥಿತಿಯನ್ನು ವಿವರಣೆ ನೀಡುವ ಮೂಲಕ ‘ಮಾದಕ ವಸ್ತು ಮುಕ್ತ ವಿದ್ಯಾರ್ಥಿ ಜೀವನ ನಮ್ಮದಾಗಲಿ’ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಜನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಜನಮಂಗಳ ಕಾರ್ಯಕ್ರಮಗಳ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭ ಶಾಲೆಯ ಶಿಕ್ಷಕ ಮಹಾದೇವ್, ವಲಯ ಮೇಲ್ವಿಚಾರಕ ಪ್ರತಾಪ್ ದೇವಾಡಿಗ, ಸೇವಾ ಪ್ರತಿನಿಧಿ ಸಾವಿತ್ರಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.