ಪೊನ್ನಂಪೇಟೆ, ನ. ೧೧: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಹುದಿಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ಹುದಿಕೇರಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ, ನವೆಂಬರ್ ೨೨ ರಿಂದ ೨೮ ರ ವರೆಗೆ ಶಿಬಿರ ನಡೆಸಲು ತೀರ್ಮಾನಿಸಲಾಗಿದೆ.

ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವವನ್ನು ಬೆಳೆಸುವುದರ ಜೊತೆಗೆ, ಕಷ್ಟ ಸುಖಗಳನ್ನು ಯಾವ ರೀತಿ ಸಮಾನವಾಗಿ ಸ್ವೀಕರಿಸಬೇಕು, ಕ್ಲಿಷ್ಟಕರವಾದ ಸಮಯ ಸಂದರ್ಭ ಬಂದಾಗ ಅದನ್ನು ಯಾವ ರೀತಿ ನಿಭಾಯಿಸಬೇಕು ಹಾಗೂ ಸಮಾಜದೊಂದಿಗೆ ಬೆರೆತು ಬದುಕುವ ಕಲೆಯನ್ನು ಹೇಗೆ ರೂಢಿಸಿಕೊಳ್ಳಬೇಕು ಎಂಬುದನ್ನು ಕಲಿಸಲು ಎನ್.ಎಸ್.ಎಸ್. ಶಿಬಿರ ಸಹಕಾರಿಯಾಗಿದೆ.

ಈ ಉದ್ದೇಶದಿಂದ ವಾರ್ಷಿಕ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಹುದಿಕೇರಿ ಗ್ರಾಮಸ್ಥರು ಸಹಕಾರ ನೀಡುವ ಮೂಲಕ ಶಿಬಿರದ ಯಶಸ್ಸಿಗೆ ಸಹಕರಿಸಬೇಕು ಎಂದರು.

ಗ್ರಾ.ಪA. ಅಧ್ಯಕ್ಷೆ ಕುಪ್ಪಣಮಾಡ ಕೆ. ಕಾವೇರಮ್ಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾವೇರಿ ಕಾಲೇಜಿನ ಎನ್.ಎಸ್.ಎಸ್ ಶಿಬಿರವನ್ನು ಹುದಿಕೇರಿಯಲ್ಲಿ ಆಯೋಜಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಶಿಬಿರದ ಯಶಸ್ಸಿಗೆ ಪಂಚಾಯಿತಿ ಹಾಗೂ ಗ್ರಾಮದ ವತಿಯಿಂದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಚೋಂದು ಪಿ.ಎಂ, ಸದಸ್ಯರಾದ ಕೆ.ಎ. ಗಣಪತಿ, ಕೊಡಂಗಡ ಬಿದ್ದಪ್ಪ, ಚೆಕ್ಕೇರ ಚಂದ್ರ ಪ್ರಕಾಶ್, ಚೇಂದಿರ ತಂಗಮ್ಮ, ಹೆಚ್.ಎಸ್. ಶಿಲ್ಪ, ಮಂಡಚAಡ ಪೊನ್ನಪ್ಪ, ಕೊಡಂಗಡ ದಮಯಂತಿ, ಎ.ಜಿ. ಮೈನಾ, ಬಿ.ಎನ್. ಸುನೀಲ್ ಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆರ್. ಜೆ. ಪುಟ್ಟರಾಜು, ಮುಖ್ಯ ಶಿಕ್ಷಕಿ ಜಯಮ್ಮ, ಎನ್.ಎಸ್.ಎಸ್. ಅಧಿಕಾರಿಗಳಾದ ಎಂ.ಎ. ಕುಶಾಲಪ್ಪ, ಪುತ್ತಾಮನೆ ಪೂಜಾ ಶರಣು ಹಾಗೂ ಎನ್.ಎಸ್.ಎಸ್ ನಾಯಕರು ಉಪಸ್ಥಿತರಿದ್ದರು.