ಕುಶಾಲನಗರ, ನ. ೧೨: ಶಿಕ್ಷಣದೊಂದಿಗೆ ಕ್ರೀಡೆ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕುಶಾಲನಗರ ಫಾತಿಮಾ ವಿದ್ಯಾ ಸಂಸ್ಥೆ ಸಹಯೋಗದೊಂದಿಗೆ ಎರಡು ದಿನ ಸ್ಥಳೀಯ ಜಂಪ್ ಸ್ಮ್ಯಾಶ್ ಒಳಾಂಗಣದಲ್ಲಿ ಏರ್ಪಡಿಸಿದ್ದ ಮೈಸೂರು ವಿಭಾಗ ಮಟ್ಟದ ೧೪ ಮತ್ತು ೧೭ ವಯೋಮಿತಿಯ

ಬಾಲಕ, ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾ ಸಾಧನೆಗೆ ಸರ್ಕಾರದ ಉದ್ಯೋಗ ನೇಮಕಾತಿಯಲ್ಲಿ ಶೇ.೨ ಅವಕಾಶ ಕಲ್ಪಿಸಲಾಗಿದೆ. ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೊಡಗು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಎಸ್ ಪಲ್ಲೇದ್ ಮಾತನಾಡಿ, ಮೈಸೂರು ವಿಭಾಗದ ಎಂಟು ಜಿಲ್ಲೆಗಳ ಮಕ್ಕಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಪಂದ್ಯಾಟಕ್ಕೆ ಶುಭ ಕೋರಿದರು

ಈ ಸಂದರ್ಭ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ, ಕರ್ನಾಟಕ ರಾಜ್ಯ ನೌಕರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಪ್ರದೀಪ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ.ಆರ್. ರತ್ನ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಎನ್. ಮಂಜುನಾಥ್, ಕೊಡಗು ಜಿಲ್ಲಾ ಗ್ರೇಡ್ ೨ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣೇಶ್, ಸೋಮವಾರಪೇಟೆ ತಾಲೂಕು ಗ್ರೇಡ್ ಒನ್ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷೆ ಎನ್.ವಿ. ಸುಜಾತ, ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಹಾಗೂ ದೈಹಿಕ ಶಿಕ್ಷಕರು, ಮತ್ತಿತರರು ಪಾಲ್ಗೊಂಡಿದ್ದರು. ನಿವೃತ್ತ ಶಿಕ್ಷಕ ಉ.ರಾ.ನಾಗೇಶ್ ಕಾರ್ಯಕ್ರಮ ನಿರೂಪಿಸಿ, ಕರುಂಬಯ್ಯ ಸ್ವಾಗತಿಸಿದರು. ಕ್ರೀಡಾಕೂಟದಲ್ಲಿ ಮೈಸೂರು ವಿಭಾಗದ ಎಂಟು ಜಿಲ್ಲೆಗಳಾದ ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಕ್ರೀಡಾಪಟುಗಳು ಸೇರಿದಂತೆ ಒಟ್ಟು ೩೨ ತಂಡಗಳು ಪಾಲ್ಗೊಂಡಿವೆ.