ಕಣಿವೆ, ನ. ೧೨: ಕುಶಾಲನಗರ ಸಮೀಪದ ಗುಡ್ಡೇನಹಳ್ಳಿಯಲ್ಲಿ ಸುಮಾರು ೫೦ ಎಕರೆಗೂ ಹೆಚ್ಚಿನ ವಿಶಾಲ ಪ್ರದೇಶದಲ್ಲಿ ಇರುವ ನಳಂದ ಗುರುಕುಲ ಪಬ್ಲಿಕ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಅತ್ಯಾಧುನಿಕ ಶೈಲಿಯ ಶಾಲಾ ಕಟ್ಟಡ ನಿರ್ಮಾಣಗೊಂಡಿದ್ದು, ತಾ.೧೩ ರಂದು (ಇಂದು) ಉದ್ಘಾಟನೆಗೊಳ್ಳಲಿದೆ.
ಮಕ್ಕಳಿಗೆ ಎಳೆಯ ಹಂತದಲ್ಲಿಯೇ ಸಂಸ್ಕಾರಯುತ, ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಪ್ರಮುಖ ಉದ್ದೇಶ ಹೊಂದಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಅಂಥೋಣಿ ರಾಜು ತಿಳಿಸಿದ್ದಾರೆ.
ಆಮದು ಮಾಡಿಕೊಂಡ ವಸ್ತುಗಳನ್ನು ಒಳಗೊಂಡ ಕಲಾತ್ಮಕ ಚಟುವಟಿಕೆಯ ಕೊಠಡಿಗಳು, ಉತ್ತಮ ಸಂವಹನಾ ಕೌಶಲಗಳಿಗಾಗಿ ಆಧುನಿಕ ಪರದೆಯನ್ನು ಒಳಗೊಂಡ ಅತ್ಯಾಕರ್ಷಕ ಕಲಿಕಾ ಮಂದಿರ, ಸಹಪಠ್ಯ ಚಟುವಟಿಕೆಗಳನ್ನು ನಡೆಸಲು ಅನುಗುಣವಾದ ವಿಶಾಲವಾದ ಒಳಾಂಗಣ ವೇದಿಕೆ, ಶಾಲಾ ಕಟ್ಟಡದೊಳಗೆ ಸುರಕ್ಷಿತ ವ್ಯವಸ್ಥೆಗಳನ್ನು ಹೊಂದಿದ ಆಧುನಿಕ ಹಾಗೂ ಆಕರ್ಷಕ ಈಜುಕೊಳ,
ಜೀವನ ಕೌಶಲ್ಯಗಳನ್ನು ಕಲಿಸುವ ಅಂದ - ಚೆಂದದ ಪ್ರಯೋಗಾಲಯ, ಡಿಜಿಟಲ್ ಕಲಿಕಾ ವ್ಯವಸ್ಥೆಯೊಂದಿಗೆ ರೋಮಾಂಚಕವಾದ ತರಗತಿ ಕೊಠಡಿಗಳು, ಉತ್ತಮ ವೈದ್ಯಕೀಯ ಸೌಲಭ್ಯಗಳು, ವಿಶ್ರಾಂತಿ ಕೊಠಡಿ ಹೀಗೆ ಹತ್ತಾರು ಮಾದರಿಗಳನ್ನು ಶಾಲಾ ಕಟ್ಟಡದೊಳಗೆ ಅನುಷ್ಠಾನಗೊಳಿಸಲಾಗಿದೆ.
ಗುರುಕುಲ ಮಾದರಿಯ ಮೌಲ್ಯಾಧಾರಿತ ಗುಣಮಟ್ಟದ ಸಮಗ್ರ ಶಿಕ್ಷಣ ಇಲ್ಲಿ ಸಾಕ್ಷಾತ್ಕಾರಗೊಳ್ಳಲಿದೆ ಎಂದು ಸಂಸ್ಥೆಯ ಛೇರ್ಮನ್ ಸಾತಪ್ಪನ್ ವಿವರಿಸಿದರು.
ತಾ.೧೩ರಂದು (ಇಂದು) ಮಧ್ಯಾಹ್ನ ೧೨-೩೦ ಗಂಟೆಗೆ ಸುತ್ತೂರು ಮಹಾಸಂಸ್ಥಾನದ ೨೪ ನೇ ಜಗದ್ಗುರು ಡಾ.ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳು ನೂತನ ಶಾಲಾ ಸಮುಚ್ಛಯವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.