ಕಣಿವೆ, ನ. ೧೨: ಹಾರಂಗಿ ಹಿನ್ನೀರು ಪ್ರದೇಶ ಹಾದ್ರೆ ಹೆರೂರು ಬಳಿ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಮೂರು ಗಂಟೆ ಆಸುಪಾಸಿನಲ್ಲಿ ಸಂಭವಿಸಿದೆ.

ಮಡಿಕೇರಿಯ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ಕೆಎ ೦೪- ಎನ್ ೬೮೪೨ ನೋಂದಣಿಯ ಮಾರುತಿ - ೮೦೦ ಬಿಳಿ ಬಣ್ಣದ ಕಾರಿನಲ್ಲಿ ಮಡಿಕೇರಿಯಿಂದ ಹಾರಂಗಿ ಹಿನ್ನೀರು ಪ್ರದೇಶಕ್ಕೆ ಪೂರ್ವಾಹ್ನ ೧೧ ಗಂಟೆಗೆ ಆಗಮಿಸಿದ್ದಾರೆ.

ಸಾವನ್ನಪ್ಪಿದ ಇಬ್ಬರು ವಿದ್ಯಾರ್ಥಿಗಳ ಪೈಕಿ ಹೆಬ್ಬೆಟ್ಟಗೇರಿ ಪಾಂಡೀರ ಪೂವಯ್ಯ ಎಂಬವರ ಪುತ್ರ ಚಸ್ವಿನ್ ಚೆಂಗಪ್ಪ (೧೯)ಎಂಬವರ ಶವವನ್ನು ನೀರಿನಿಂದ ಹೊರತೆಗೆಯಲಾಗಿದ್ದು ಈತನ ಮತ್ತೊಬ್ಬ ಸ್ನೇಹಿತ ತರುಣ್ ತಿಮ್ಮಯ್ಯ (೧೯) ಶವಕ್ಕಾಗಿ ಶೋಧ ಮುಂದುವರೆದಿದೆ.

ಈ ಇಬ್ಬರೊಂದಿಗೆ ದಾವಿಸಿದ್ದ ಮಡಿಕೇರಿ ರಾಣಿಪೇಟೆಯ ಮೇಚಂಡ ಮುತ್ತಣ್ಣ ಎಂಬವರ ಪುತ್ರ ಲವೀನ್ ಪೊನ್ನಪ್ಪ ಬದುಕುಳಿದ ಅದೃಷ್ಟಶಾಲಿ.

ದುರಂತದ ವಿಚಾರ ತಿಳಿಯುತ್ತಿದ್ದಂತೆಯೇ ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ನೇತೃತ್ವದಲ್ಲಿ ಸುಂಟಿಕೊಪ್ಪ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು.

ಬಳಿಕ ಕುಶಾಲನಗರ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಹಾಗೂ ದುಬಾರೆ ರ‍್ಯಾಫ್ಟಿಂಗ್ ಸಿಬ್ಬಂದಿಗಳು ಧಾವಿಸಿ ಶವಶೋಧ ನಡೆಸಿದರು.

ಮೃತ ವಿದ್ಯಾರ್ಥಿಗಳು ಕಾರಿನಲ್ಲಿ ಬಂದವರು ಹಿನ್ನೀರು ಪ್ರದೇಶದಿಂದ ಸುಮಾರು ಒಂದು ಕಿ.ಮೀ. ದೂರ ತೆರಳಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಮಾತ್ರ ಶೋಚನೀಯ.

ಮೂವರ ಪೈಕಿ ಬದುಕುಳಿದ ನವೀನ್ ಪೊನ್ನಪ್ಪ ಅವರನ್ನು ಮಾತನಾಡಿಸಿದಾಗ, ನನಗೆ ಚೆಂಗಪ್ಪ ಅಷ್ಟೆ ಸ್ನೇಹಿತ. ಮೃತ ಇನ್ನೊಬ್ಬ ನನಗೆ ಪರಿಚಯವಿರಲಿಲ್ಲ.

ನಾನು ಬರುವುದಿಲ್ಲ ಎಂದರೂ ಕೂಡ ಚೆಂಗಪ್ಪ ಒತ್ತಾಯ ಮಾಡಿ ಮಡಿಕೇರಿಯಿಂದ ಕರೆದೊಯ್ದ. ನಾನು ನೀರಿಗಿಳಿಯಲಿಲ್ಲ. ಅವರಿಬ್ಬರು ಶರ್ಟು ಮಾತ್ರ ತೆಗೆದು ಪ್ಯಾಂಟಿನಲ್ಲಿಯೇ ನೀರಿಗಿಳಿದಿದ್ದರು. ದಡದಿಂದ ಕಿಮೀ ನಷ್ಟು ದೂರ ತೆರಳಿ ನೀರಿಗಿಳಿದಿದ್ದರು.

ಮೊದಲು ಚೆಂಗಪ್ಪನ ಸ್ನೇಹಿತ ನೀರಿನಲ್ಲಿ ಮುಳುಗಿದ್ದುದು ಕಂಡು ಚೆಂಗಪ್ಪ ಕೂಗಿಕೊಂಡದ್ದು ನೋಡಿ ನಾನು ಅವರ ಬಳಿ ಓಡಿಹೋದೆ.

ಸ್ನೇಹಿತನನ್ನು ಉಳಿಸಲು ಹೋದ ಚೆಂಗಪ್ಪನೂ ಕೂಡ ಮುಳುಗುವುದನ್ನು ಕಂಡು ನಾನು ಬಟ್ಟೆ ಸಹಿತ ನೀರಿಗೆ ದುಮುಕಿ ಉಳಿಸಲು ಪ್ರಯತ್ನ ಪಟ್ಟೆ.

ಅಷ್ಟರಲ್ಲಿ ಅವರಿಬ್ಬರು ನೀರಲ್ಲಿ ಮುಳುಗಿದ್ದರು. ಬಳಿಕ ನಾನು ಕಿರುಚಿದಾಗ ಅಕ್ಕ ಪಕ್ಕದ ತೋಟದವರು ಬಂದದ್ದು ಮಾತ್ರ ನನಗೆ ಗೊತ್ತು ಎಂದು ಲವೀನ್ ವಿವರಿಸಿದ.

ಪ್ರತಿ ವರ್ಷವೂ ಹಾರಂಗಿ ಹಿನ್ನೀರಿನಲ್ಲಿ ಇಂತಹ ಸಾವಿನ ಪ್ರಕರಣಗಳು ಜರುಗುತ್ತಲೇ ಇದ್ದು, ಸ್ಥಳೀಯರಾದ ನಾವು ಕಲ್ಲು ಬಂಡೆಗಳನ್ನು ಜೋಡಿಸಿ ವಾಹನಗಳು ಇಳಿಯದಂತೆ ಕ್ರಮ ಜರುಗಿಸಿದರೂ ಕೂಡ ಕೆಲವರು ಪುಂಡಾಟ ನಡೆಸುತ್ತಾ ಬೇಕೆಂದೇ ಸಾವನ್ನು ಆಹ್ವಾನಿಸಲು ಇಲ್ಲಿ ಧಾವಿಸುತ್ತಲೇ ಇದ್ದಾರೆ ಎಂದು ಸ್ಥಳೀಯ ನಿವಾಸಿಯೂ ಆದ ನಾಕೂರು ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ್ ‘ಶಕ್ತಿ’ಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಚಂದ್ರಶೇಖರ್, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜು, ಸಿಬ್ಬಂದಿಗಳಾದ ಸುಧೀಶ ಕುಮಾರ್, ಹೊನ್ನರಾಜು, ಉಮೇಶ, ಶಶಿಕುಮಾರ್ ಭೇಟಿ ನೀಡಿದ್ದರು.