ಮಡಿಕೇರಿ, ನ. ೮: ನಗರಸಭೆ ಆಡಳಿತದ ವೇಗ ಸಹಿಸಲಾಗದೆ ಕಾಂಗ್ರೆಸ್ ಸುಳ್ಳು ಆರೋಪವನ್ನು ಹೊರಿಸಿ ಅಪಪ್ರಚಾರ ನಡೆಸುತ್ತಿದೆ ಎಂದು ನಗರ ಮಂಡಲ ಬಿಜೆಪಿ ದೂರಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭಾ ಉಪಾಧ್ಯಕ್ಷ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಗರಸಭೆ ಆಡಳಿತ ನಿಷ್ಕಿçಯವಾಗಿದೆ ಎಂದು ನಗರಸಭಾ ಸದಸ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾಡಿರುವ ಆರೋಪ ಶುದ್ಧ ಸುಳ್ಳಾಗಿದೆ. ಆಡಳಿತದ ಅಭಿವೃದ್ಧಿ ವೇಗ ತಾಳಲಾರದೆ ರಾಜಕೀಯ ಲಾಭಕ್ಕೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ದಸರಾ ಸಂದರ್ಭದಲ್ಲಿ ರೂ. ೧೦ ಲಕ್ಷ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆದಿದೆ. ನಗರದ ರಸ್ತೆ ಅಭಿವೃದ್ಧಿಗೆ ಎನ್.ಡಿ.ಆರ್.ಎಫ್.ನಿಂದ ರೂ. ೩೮ ಲಕ್ಷ ಹಾಗೂ ನಗರಸಭೆಯಿಂದ ರೂ. ೧೦ ಲಕ್ಷ ಹಣ ಮೀಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ರಾಜಾಸೀಟ್ ಬಳಿ ವಾಹನ ನಿಲುಗಡೆ ಶುಲ್ಕ ಸಂಗ್ರಹದ ಟೆಂಡರ್ ಪಡೆದವರು ಬಿಡ್ಡಿಂಗ್ ಮೊತ್ತ ಪಾವತಿಸಿಲ್ಲ ಎಂದಿರುವ ರಾಜೇಶ್ ಯಲ್ಲಪ್ಪ ಅವರೇ ಈ ಹಿಂದಿನ ಸಭೆಯಲ್ಲಿ ಅವರಿಗೆ ಸಮಯಾವಕಾಶ ನೀಡುವಂತೆ ಪ್ರಸ್ತಾಪಿಸಿದ್ದರು. ಇದೀಗ ಈ ವಿಷಯ ಮರೆತು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ನಡೆಸಿದ ಸಭೆಯಲ್ಲಿ ರಾಜೇಶ್ ಯಲ್ಲಪ್ಪ ಹಾಗೂ ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯರು ಸರಕಾರಿ ಬಸ್ ಡಿಪೋ ಬಳಿಯ ಶೆಡ್ ನಿರ್ಮಾಣ ವಿಚಾರವನ್ನು ಮಾತ್ರ ಮುಂದಿಟ್ಟು ಪ್ರತಿಭಟಿಸಿ ಬೇರೆ ವಿಷಯಗಳನ್ನು ಚರ್ಚಿಸದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದÀÄ. ವೈಯಕ್ತಿಕ ಹಿತಾಸಕ್ತಿಗಾಗಿ ಈ ರೀತಿ ಮಾಡಿದ್ದಾರೆ. ನಗರಸಭೆಯ ಸ್ವಂತ ನಿಧಿ ರೂ. ೩.೨೫ ಕೋಟಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಈ ಮೂಲಕ ರೂ. ೧.೫೦ ಕೋಟಿ ವೆಚ್ಚದಲ್ಲಿ ವಿವಿಧ ವಾರ್ಡ್ಗಳಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ರಾಜಕೀಯ ರಹಿತವಾಗಿ ಎಲ್ಲಾ ಸದಸ್ಯರ ವಾರ್ಡ್ಗಳಿಗೆ ಅನುದಾನ ಒದಗಿಸಲಾಗಿದೆ. ಆದರೆ, ಶಾಸಕರ ನಿಧಿಯಿಂದ ಬಂದ ಸಿಂಹಪಾಲು ಅನುದಾನ ರಾಜೇಶ್ ಯಲ್ಲಪ್ಪ ವಾರ್ಡ್ಗೆ ವಿನಿಯೋಗವಾಗುತ್ತಿದೆ. ಶಾಸಕರನ್ನು ದಾರಿ ತಪ್ಪಿಸಿ ಈ ರೀತಿ ಮಾಡಲಾಗುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ನಗರಸಭೆ ನಿಷ್ಕಿçಯವಾಗಿತ್ತು. ಹಾಗಾಗಿ ಏಕೈಕ ಕಾಂಗ್ರೆಸ್ ಸದಸ್ಯ ಇರಲು ಕಾರಣವಾಗಿದೆ ಎಂದರು.
ರೂ. ೧೩ ಲಕ್ಷ ವೆಚ್ಚದಲ್ಲಿ ಮೀನು ಮಾರುಕಟ್ಟೆ ನಿರ್ಮಾಣ, ಕೇಂದ್ರದ ಅಮೃತ್ ಯೋಜನೆ ಕೆಲಸ, ಹೈಟೆಕ್ ಪಾರ್ಕ್ಗಳ ನಿರ್ಮಾಣ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು, ರಾಜೇಶ್ ಯಲ್ಲಪ್ಪ ಅವರಿಗೆ ಸಾಧ್ಯವಾದರೆ ನಗರಸಭೆಯಲ್ಲಿರುವ ಖಾಲಿ ಹುದ್ದೆ ಭರ್ತಿ ಮಾಡುವ ಪ್ರಯತ್ನ ನಡೆಸಲಿ ಎಂದು ಸವಾಲೆಸೆದರು
ನಗರಸಭಾ ಸದಸ್ಯ, ಮಡಿಕೇರಿ ಮಂಡಲ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಮಾತನಾಡಿ, ತಾತ್ಕಾಲಿಕ ಶೆಡ್ ಬಿಜೆಪಿ ಕಾರ್ಯಕರ್ತರಿಗೆ ಸೇರಿದೆ ಎಂಬ ಒಂದೇ ಒಂದು ಕಾರಣಕ್ಕೆ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ. ವೈಯಕ್ತಿಕ ಹಿತಾಸಕ್ತಿ ಸಾಧನೆ ಮಾಡಲು ಮುಂದಾಗಿದೆ. ನಗರಸಭೆ ಹಾಗೂ ಹೆದ್ದಾರಿ ಪ್ರಾಧಿಕಾರದಿಂದ ಶೆಡ್ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರವನ್ನು ಸಂಬAಧಿಸಿದವರು ಪಡೆದಿದ್ದಾರೆ. ಕಾಂಗ್ರೆಸ್ ಪ್ರಮುಖರೊಬ್ಬರು ಅನುಮತಿ ಪಡೆಯದೆ ಸ್ನೂಕರ್ ಕ್ಲಬ್ ತೆರೆಯಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜಿಲ್ಲಾ ಬಿಜೆಪಿ ವಕ್ತಾರ ಬಿ.ಕೆ. ಅರುಣ್ ಕುಮಾರ್ ಮಾತನಾಡಿ, ಬಿಜೆಪಿ ಮಾಡುವ ಅಭಿವೃದ್ಧಿ ಕೆಲಸಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಜನರ ಸಮಸ್ಯೆಗಳಿಗೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನಗರಸಭಾ ಸದಸ್ಯೆ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ತಾನು ಅಧ್ಯಕ್ಷೆಯಾಗಿದ್ದ ಸಂದರ್ಭ ನಗರಸಭೆಗೆ ಸ್ವಂತ ಜೆಸಿಬಿ ಖರೀದಿ, ನೀರಿನ ಘಟಕಕ್ಕೆ ಹೊಸ ಮೋಟರ್ ಅಳವಡಿಕೆ, ಬೀದಿ ದೀಪ ವ್ಯವಸ್ಥೆ, ಕುಡಿಯುವ ನೀರು ಯೋಜನೆ ಹೀಗೆ ನಾನಾ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದೇನೆ. ಕಸ ವಿಲೇವಾರಿಗೆ ಟೆಂಡರ್ ನಡೆಸಲಾಗಿದ್ದು, ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕೂ ಮುಂದಾಗಲಾಗಿದೆ. ಶೀಘ್ರದಲ್ಲಿ ಈ ಕೆಲಸವೂ ಆಗಲಿದೆ. ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದರು.
ಗೋಷ್ಠಿಯಲ್ಲಿ ಮಡಿಕೇರಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಉಪಾಧ್ಯಕ್ಷ ಎಂ.ಎ. ಡಿಶು ಹಾಜರಿದ್ದರು.