ಶನಿವಾರಸಂತೆ: ನ. ೭: ರೋಟರಿ ಕ್ಲಬ್‌ನ ಸಮಾಜಮುಖಿ ಕಾರ್ಯಕ್ರಮಗಳು ನಿರಂತರ ಅವಲೋಕನದಲ್ಲಿದ್ದು ಮುಂದುವರೆಯಬೇಕು. ಸೇವೆಗಾಗಿ ಭಾರತದ ರೋಟರಿ ಕ್ಲಬ್ ವಿಶ್ವದಲ್ಲಿ ಅತಿಹೆಚ್ಚು ಹಣ ತೊಡಗಿಸುವ ದೇಶ ಎಂಬ ಹೆಗ್ಗಳಿಕೆಯಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಪಿ.ಕೆ. ರಾಮಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರಸಂತೆ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿ, ಸಮೀಪದ ದೇವ್ಸ್ ರೆಸಾರ್ಟ್ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅವಧಿ ಮುಗಿದರೂ ರೋಟರಿ ರೊಟೇರಿಯನ್ನರ ಸೇವೆ ಮುಂದುವರೆಯಲೇ ಬೇಕು. ಭಾರತ ವಿಶ್ವದಲ್ಲೇ ಪೋಲಿಯೋ ಮುಕ್ತ ದೇಶ ಎಂಬುದು ಹೆಮ್ಮೆಯ ವಿಷಯ. ಕೊಡಗನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಟ್ಟಿರುವ ರೋಟರಿಯ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೊಟೇರಿಯನ್ ಕೆ.ಪಿ. ಜಯಕುಮಾರ್ ಮಾತನಾಡಿ, ಪರಿಸರ ಹಾನಿಗೆ ಮಾನವನೇ ಕಾರಣವಾಗಿದ್ದು; ಆಧುನಿಕತೆಯತ್ತ ಹೆಜ್ಜೆ ಹಾಕುವ ಭ್ರಮಾಲೋಕದಲ್ಲಿದ್ದಾನೆ. ಭೂಮಿಯಲ್ಲಿ ಸೇರಿದ ಪ್ಲಾಸ್ಟಿಕ್ ಕರಗಲು ೧ ಸಾವಿರ ವರ್ಷ ಬೇಕು. ಪ್ಲಾಸ್ಟಿಕ್‌ನಿಂದಾಗಿ ಭೂಮಿ ಬಂಜೆಯಾಗುತ್ತಿದ್ದಾಳೆ. ನೆಲ, ಜಲ, ಪ್ರಕೃತಿಯೇ ನಾಶವಾಗುತ್ತಿದೆ.ಮಾನವ ಮಾರಣಾಂತಿಕ ಕಾಯಿಲೆಗೆ ಬಲಿಯಾಗುತ್ತಿದ್ದಾನೆ. ಕೊಡಗು ರೋಟರಿ ಕ್ಲಬ್ ಕೊಡಗನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆನ್ನುವ ಪಣ ತೊಟ್ಟಿದೆ ಎಂದರು.

ರೋಟರಿ ಕ್ಲಬ್ ಜಿಲ್ಲಾ ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ ಮಾತನಾಡಿ, ರೋಟರಿಯ ಸಮಾಜಸೇವಾ ಕೆಲಸಕ್ಕೆ ಇತಿಶ್ರೀ ಎಂಬುದೇ ಇಲ್ಲ.ಶನಿವಾರಸಂತೆ ರೋಟರಿ ಕ್ಲಬ್ ಸೇವೆಯ ಜತೆಗೆ ಕ್ರಿಕೆಟ್ ಕ್ರೀಡಾಕೂಟದಲ್ಲೂ ಪಾಲ್ಗೊಂಡು ಪ್ರಥಮ ಸ್ಥಾನ ಗಳಿಸಿದೆ.ಮುಂದೆ ಪುತ್ತೂರಿನಲ್ಲಿ ನಡೆಯುವ ಸ್ನೇಹ ಸೌರಭ ಕಾರ್ಯಕ್ರಮದಲ್ಲೂ ರೋಟರಿ ಸದಸ್ಯರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗೋಪಾಲಪುರ ಬಸ್ ತಂಗುದಾಣ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ. ಅಶೋಕ್ ಹಾಗೂ ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಡಾ. ಅಶೋಕ್ ಸಂಸ್ಥೆಗೆ ತಮ್ಮಿಂದಾಗುವಷ್ಟು ಸೇವೆ ಸಲ್ಲಿಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಲಯ ಸೇನಾನಿ ರಾಮಣ್ಣ ಹಾಗೂ ರೊಟೇರಿಯನ್ ವಸಂತ್ ಕುಮಾರ್ ಮಾತನಾಡಿದರು.ಪರಿಸರ ಹಾನಿ ಮಾಡದಂತೆ ಸ್ಟಿಕ್ಕರ್ ಕಟ್ಟಿಂಗ್ಸ್ ಗಳನ್ನು ಸದಸ್ಯರಿಗೆ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಎಚ್.ಎಸ್. ಯಶವಂತ್ ಮಾತನಾಡಿ, ತಮ್ಮ ಅವಧಿಯಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಭರವಸೆ ನೀಡಿದರು. ಸದಸ್ಯರಾದ ವಸಂತಕುಮಾರಿ ಪ್ರಾರ್ಥಿಸಿದರು. ಎ.ಎಚ್. ಚಂದ್ರಕಾAತ್ ಸ್ವಾಗತಿಸಿದರು. ಬೀನಾ ಅರವಿಂದ್ ಹಾಗೂ ಶ್ವೇತಾ ವಸಂತ್ ಅತಿಥಿಗಳ ಪರಿಚಯಿಸಿದರು. ವಾರ್ಷಿಕ ಕಾರ್ಯ ಚಟುವಟಿಕೆಗಳ ವರದಿ ಮಂಡಿಸಿದ ರೋಟರಿ ಕ್ಲಬ್ ಕಾರ್ಯದರ್ಶಿ ಎಚ್.ಪಿ. ಚಂದನ್ ವಂದಿಸಿದರು. ರೊಟೇರಿಯನ್ನರು ಹಾಜರಿದ್ದರು. ಕಾರ್ಯಕ್ರಮಕ್ಕೆ ಮೊದಲು ರೋಟರಿ ವತಿಯಿಂದ ಶನಿವಾರಸಂತೆ ಸುತ್ತಮುತ್ತ ೫ ಕಡೆಗಳಲ್ಲಿ “ಪ್ಲಾಸ್ಟಿಕ್ ಬಳಕೆ ತಗ್ಗಿಸಿ, ಅಮೂಲ್ಯ ಪರಿಸರ ಉಳಿಸಿ’’ ಎಂಬ ನಾಮಫಲಕಗಳನ್ನು ಅಳವಡಿಸಲಾಯಿತು.