ಸಿದ್ದಾಪುರ, ನ. ೭: ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ದಾಂಧಲೆ ನಡೆಸಿ ಕೃಷಿ ಫಸಲು ನಾಶಗೊಳಿಸಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ.

ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಮೇಕೂರು - ಹೊಸ್ಕೇರಿ ಗ್ರಾಮ ಮತ್ತು ಚೆನ್ನಯ್ಯನ್ನಕೋಟೆ ಗ್ರಾಮದ ಕುಟ್ಟಂಡ, ಕುಪ್ಪಂಡ, ಬಡುವಂಡ, ಬಿದ್ದಂಡ ಮತ್ತು ಬಾಡಗ - ಬಾಣಂಗಾಲ ಗ್ರಾಮದ ಬಿ ಕಾನಂಗಾಡು ತೋಟಗಳಲ್ಲಿ ಬೀಡುಬಿಟ್ಟ ಕಾಡಾನೆಗಳು ಫಸಲಿರುವ ತೆಂಗು ಮರಗಳನ್ನು, ಅಡಿಕೆ ಮರಗಳನ್ನು ಮತ್ತು ಕಾಫಿ ಗಿಡಗಳನ್ನು ಧ್ವಂಸಗೊಳಿಸಿವೆ. ಇದರಿಂದಾಗಿ ಬೆಳಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕೈಗೆ ಬಂದ ತುತ್ತು. ಬಾಯಿಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೆಳೆಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

೩೫ ಕಾಡಾನೆಗಳು ಮರಳಿ ಕಾಡಿಗೆ

ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಮೇಕೂರು-ಹೊಸ್ಕೇರಿ ಹಾಗೂ ಬಾಡಗ-ಬಾಣಂಗಾಲ ಗ್ರಾಮದ ವ್ಯಾಪ್ತಿಯಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಹಿಂಡನ್ನು ಕಾಡಿಗೆ ಓಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ವಲಯ ಎ.ಸಿ.ಎಫ್. ಗೋಪಾಲ್ ಮತ್ತು ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ತಂಡದ ವತಿಯಿಂದ ಕಾರ್ಯಾಚರಣೆ ನಡೆಸಿ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶಕ್ಕೆ ಓಡಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯ ಸಂದರ್ಭ ಮೂರು ಹಿಂಡುಗಳ ೫ ಮರಿಯಾನೆ ಸೇರಿದಂತೆ ೩೫ಕ್ಕೂ ಅಧಿಕ ಕಾಡಾನೆಗಳು ಕಂಡುಬAದವು ಎಂದು ಉಪ ವಲಯ ಅರಣ್ಯ ಅಧಿಕಾರಿ ಶಶಿ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಕಷ್ಟು ಶ್ರಮಪಟ್ಟು ಕಾಡಾನೆಗಳನ್ನು ಕಾಡಿಗೆ ಅಟ್ಟಿದರೂ ಕೂಡ ರಾತ್ರಿ ಸಮಯದಲ್ಲಿ ಮತ್ತೆ ಹಿಂತಿರುಗಿ ನಾಡಿನತ್ತ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿವೆ. ಇದರಿಂದಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸರ್ಕಾರವು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್.ಆರ್.ಟಿ. ತಂಡ, ಆನೆ ಕಾರ್ಯಪಡೆ ತಂಡದ ಸಿಬ್ಬಂದಿಗಳು ಮತ್ತು ವನ್ಯಜೀವಿ ವಲಯದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.