ಚೆಯ್ಯಂಡಾಣೆ, ನ.೮: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪತ್ತೇಟಿ ತಟ್ಟಮಕ್ಕಿ ಪ.ಜಾತಿ ಕಾಲೋನಿಗೆ ತೆರಳುವ ೪೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರÀ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು.
ನಂತರ ತಟ್ಟಮಕ್ಕಿ ಕಾಲೋನಿಯಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ ವಹಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಎ.ಎಸ್. ಪೊನ್ನಣ್ಣ ಅವರು ಜಯಶೀಲರಾಗಿ ಬಂದರೆ ಈ ರಸ್ತೆಯನ್ನು ಕಾಂಕ್ರೀಟ್ ರಸ್ತೆ ಅಥವಾ ಡಾಂಬರು ರಸ್ತೆಯಾಗಿ ಮಾಡಿ ಒಂದು ವರ್ಷದಲ್ಲಿ ಮುಗಿಸಿಕೊಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಅದು ಇಂದು ನೆರವೇರಿದೆ ಎಂದರು.
ತಟ್ಟಮಕ್ಕಿ ಗ್ರಾಮಸ್ಥೆ ದೇವಕ್ಕಿ ಮಾತನಾಡಿ, ಕಾಲೋನಿಗೆ ಅಂಗನವಾಡಿ ಕೇಂದ್ರ, ಸಮುದಾಯ ಭವನ ಹಾಗೂ ಕಾಲೋನಿಯಲ್ಲಿ ವಾಸಿಸುವ ನಿವಾಸಿಗಳ ಜಾಗಕ್ಕೆ ಅಕ್ರಮ ಸಕ್ರಮ ಮೂಲಕ ಸರ್ವೇ ಮಾಡಿ ಹಕ್ಕು ಪತ್ರ ನೀಡಬೇಕು ಎಂದು ಶಾಸಕರನ್ನು ಒತ್ತಾಯಿಸಿದರು.
ಇದೇ ಸಂದರ್ಭ ಗ್ರಾಮಸ್ಥರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಶಾಸಕರಿಗೆ ನೀಡಿದರು. ನಂತರ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಬಹಳ ವರ್ಷಗಳ ಬಳಿಕ ರಸ್ತೆ ದುರಸ್ತಿಯಾಗಿದ್ದು ಎಲ್ಲರಿಗೂ ಅನುಕೂಲವಾಗಿದೆ ಎಂದು ಭಾವಿಸುತ್ತೇನೆ, ಚುನಾವಣೆ ಸಂದರ್ಭ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದ್ದೇನೆ.
ಮುಂದಿನ ದಿನಗಳಲ್ಲಿ ಕೂಡ ನಿಮ್ಮ ಸೇವೆ ಮಾಡಲು ನಾನು ಸದಾ ಸಿದ್ಧನಿದ್ದೇನೆ ಎಂದರಲ್ಲದೆ ಸಮುದಾಯ ಭವನ, ಅಂಗನವಾಡಿ ಹಾಗೂ ಜಾಗದ ಹಕ್ಕುಪತ್ರ ಎಲ್ಲವನ್ನು ಕೂಡ ಮುಂದಿನ ದಿನಗಳಲ್ಲಿ ಒದಗಿಸುವ ಭರವಸೆ ನೀಡಿದರು. ತಟ್ಟಮಕ್ಕಿ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಸ್.ಪುಷ್ಪ, ಪಾಂಡAಡ ರಾಣಿ ಗಣಪತಿ, ವಾಣಿ, ಸುಬೈರ್, ಮಮ್ಮದ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕಂದಾಯ ಪರಿವಿಕ್ಷಕ ರವಿಕುಮಾರ್, ಶೈಲಾ ಕುಟ್ಟಪ್ಪ,ಐತಿಚಂಡ ಪ್ರಕಾಶ್ ಕಾರ್ಯಪ್ಪ, ಗ್ರಾಮಸ್ಥರು ಮತ್ತಿತರರು ಹಾಜರಿದ್ದರು.