ಗೋಣಿಕೊಪ್ಪಲು, ನ. ೩: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಅನತಿ ದೂರದಲ್ಲಿರುವ ೧ನೇ ವಿಭಾಗಕ್ಕೆ ಸೇರಿರುವ ನೇತಾಜಿ ಬಡಾವಣೆ ಹಾಗೂ ನಾಗಪ್ಪ ಬಡಾವಣೆಯಲ್ಲಿ ಕಾಡಾನೆಯೊಂದು ಕಾಣಿಸಿಕೊಂಡ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಡರಾತ್ರಿ ೧.೩೦ರ ಸುಮಾರಿಗೆ ೧ನೇ ವಿಭಾಗದ ನಾಗಪ್ಪನ ಬಡಾವಣೆಯಲ್ಲಿ ಕಾಣಿಸಿಕೊಂಡ ಕಾಡಾನೆಯು ನಂತರ ಕೃಷಿ ವಿಜ್ಞಾನ ಕೇಂದ್ರದ ವಸತಿ ಗೃಹದ ಬಳಿ ಮುಂಜಾನೆ ೨.೫೬ಕ್ಕೆ ಕಾಣಿಸಿಕೊಂಡಿದೆ. ನಂತರ ೩ಗಂಟೆಯ ವೇಳೆ ಪ್ರತಿಷ್ಠಿತ ನೇತಾಜಿ ಬಡಾವಣೆಯಲ್ಲಿ ಕಾಡಾನೆಯ ಸಂಚಾರ ಕಂಡು ಬಂದಿದೆ.
ಕಾಡAಚಿನಿAದ ದಾರಿತಪ್ಪಿದ ಕಾಡಾನೆಯು ಕಿತ್ತಳೆ ಬೆಳೆಗಾರರ ಸಂಘದ ತೋಟದಿಂದಿಳಿದು ಜನವಸತಿ ಪ್ರದೇಶದತ್ತ ಹೆಜ್ಜೆ ಹಾಕಿದೆ. ಕಾಡಾನೆಯ ಆಗಮನದ ಹಿನ್ನೆಲೆಯಲ್ಲಿ ಮಾಹಿತಿ ತಿಳಿದ ಗೋಣಿಕೊಪ್ಪ ರೋಟರಿ ಕ್ಲಬ್‌ನ ಕಾರ್ಯದರ್ಶಿ ಎಂ.ಪಿ. ಪ್ರಮೋದ್ ಕಾಮತ್, ತಡರಾತ್ರಿಯ ವೇಳೆ ೧೧೨ಗೆ ಕರೆ ಮಾಡುವ ಮೂಲಕ ಇಲ್ಲಿಯ ವಿದ್ಯಮಾನಗಳನ್ನು ವಿವರಿಸಿದ್ದಾರೆ. ವಾಹನದೊಂದಿಗೆ ಆಗಮಿಸಿದ ಪೊಲೀಸ್ ಸಿಬ್ಬಂದಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.
ಬೆಳಕು ಹರಿಯುತ್ತಿದ್ದಂತೆಯೇ ಕಾಡಾನೆಯು ಜನವಸತಿ ಪ್ರದೇಶದಿಂದ ಸಮೀಪದ ತೋಟದ ಮಾರ್ಗವಾಗಿ ಕಾಡಂಚಿಗೆ ತೆರಳಿದೆ. ಇದರಿಂದಾಗಿ ಮುಂದಾಗಬಹುದಾಗಿದ್ದ ದೊಡ್ಡ ಅನಾಹುತದಿಂದ ನಾಗರಿಕರು ಪಾರಾಗಿದ್ದಾರೆ. ಮುಂಜಾನೆ ೫ ಗಂಟೆ ಸುಮಾರಿಗೆ ಪ್ರತಿಷ್ಠಿತ ಬಡಾವಣೆಯ ನಿವಾಸಿಗಳು ನಗರಕ್ಕೆ ವಾಯು ವಿಹಾರಕ್ಕಾಗಿ ಆಗಮಿಸುವುದು ವಾಡಿಕೆಯಾಗಿದೆ. ಈ ವೇಳೆ ಕಾಡಾನೆಯು ಒಂದು ವೇಳೆ ನಾಗರಿಕರಿಗೆ ಎದುರಾಗಿದ್ದರೆ ದೊಡ್ಡ ಅನಾಹುತವೇ ನಡೆಯುವ ಸಂಭವವಿತ್ತು.