ಕುಶಾಲನಗರ, ನ. ೩: ಸೆಂಟರ್ ಆಫ್ ಇಂಡಿಯನ್ ಗ್ರೇಟ್ ಯೂನಿಯನ್ (ಸಿಐಟಿಯು) ೬ನೇ ಕೊಡಗು ಜಿಲ್ಲಾ ಸಮ್ಮೇಳನಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.
ಕುಶಾಲನಗರ ಕೇರಳ ಸಮಾಜ ಕಟ್ಟಡದ ಸಭಾಂಗಣದಲ್ಲಿ ನಡೆದ ಸಮ್ಮೇಳನವನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಾಲತೇಶ್ ಉದ್ಘಾಟಿಸಿ ಮಾತನಾಡಿದರು.
ರಾಜ್ಯಾದ್ಯಂತ ಕಾರ್ಮಿಕ ವರ್ಗ ಹಲವು ಸಮಸ್ಯೆಗಳಿಂದ ವಂಚಿತರಾಗಿದ್ದು ಬದುಕು ಸಂಕಷ್ಟದ ನಡುವೆ ಇದ್ದು ಹಲವು ವರ್ಷಗಳಿಂದ ಕಾರ್ಮಿಕರ ಬೇಡಿಕೆಗಳು ನೆನೆಗುದಿಗೆ ಬಿದ್ದಿವೆ. ಕಾರ್ಮಿಕ ಕುಟುಂಬ ಸದಸ್ಯರಿಗೆ ಶಿಕ್ಷಣ, ಆರೋಗ್ಯ, ಭದ್ರತೆಯ ಕೊರತೆ ಕಾಡುತ್ತಿದೆ. ಅಸಂಘಟಿತ ಕಾರ್ಮಿಕ ವರ್ಗದ ಸಮಸ್ಯೆಯ ಬಗ್ಗೆ ರಾಜ್ಯ ಕೇಂದ್ರ ಸರ್ಕಾರಗಳ ಸ್ಪಂದನ ದೊರೆಯುತ್ತಿಲ್ಲ ಎಂದರು.
ಕಾರ್ಮಿಕರಿಗೆ ಕನಿಷ್ಟ ವೇತನ ಪರಿಷ್ಕರಣೆ ನಡೆಯದೆ ಬದುಕು ದುಸ್ತರವಾಗಿದೆ. ಸಂಬಳ ಸೌಲಭ್ಯಗಳ ಕೊರತೆಯ ನಡುವೆ ಕಾರ್ಮಿಕ ವರ್ಗದ ಗೌರವ ಘನತೆಯ ಬಗ್ಗೆ ಯಾರು ಕಾಳಜಿ ವಹಿಸುತ್ತಿಲ್ಲ. ಸಂಘಟನೆಯ ಮೂಲಕ ದೀರ್ಘ ಹೋರಾಟದಿಂದ ಕನಿಷ್ಟ ಸೌಲಭ್ಯಗಳು ದೊರಕುವಂತಾಗಿದೆ. ರಾಜ್ಯ ಕೇಂದ್ರ ಸರ್ಕಾರಗಳ ನೀತಿಗಳು ಕಾರ್ಮಿಕ ಬಡವರ ಪರ ಆಗಬೇಕಾಗಿದೆ ಎಂದರು.
೩೦ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನ ಈಗಾಗಲೇ ನಡೆದಿದ್ದು, ಕಾರ್ಮಿಕ ವರ್ಗ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆ ನಿರಂತರ ಹೋರಾಟ ಮಾಡುವ ಬಗ್ಗೆ ಚರ್ಚೆ ನಡೆದಿದೆ.
ಕೊಡಗು ಜಿಲ್ಲೆಯಲ್ಲಿ ವಿಶೇಷವಾಗಿ ಕಾರ್ಮಿಕರಿಗೆ ಕಾಡುಪ್ರಾಣಿಗಳ ಹಾವಳಿ ಅಧಿಕವಾಗಿದ್ದು ಇದರಿಂದ ಅಭದ್ರತೆ ಕಾಡುತ್ತಿದೆ. ಜಿಲ್ಲೆಯಲ್ಲಿ ಬೆಳೆಗಳಿಗೆ ಬೆಂಬಲ ಬೆಲೆ ಕೂಡ ನಿಗದಿಯಾಗುತ್ತಿಲ್ಲ ಇದರ ದುಷ್ಪರಿಣಾಮ ಕಾರ್ಮಿಕರ ಬದುಕಿನ ಮೇಲೆ ವ್ಯತಿರಿಕ್ತವಾಗಿ ಬೀರುತ್ತಿದೆ ಎಂದರು. ಕಾರ್ಮಿಕರಿಗೆ ಕನಿಷ್ಟ ವೇತನ ನಿಗದಿ ಬಗ್ಗೆ ಹಲವು ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಆರ್. ಭರತ್, ಸಂಘಟನೆಯೊAದಿಗೆ ವಿವಿಧ ವಿಭಾಗಗಳ ಕಾರ್ಮಿಕರ ಸಮಸ್ಯೆಯ ಬಗ್ಗೆ ನಿರಂತರವಾಗಿ ಕೊಡಗು ಜಿಲ್ಲೆಯಲ್ಲಿ ಹೋರಾಟ ನಡೆಯುತ್ತಿದೆ. ಕಾರ್ಮಿಕರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲಾಗುತ್ತಿದೆ.ಕೊಡಗು ಜಿಲ್ಲೆಯಲ್ಲಿ ಸಿಐಟಿಯು ೯ ಸಂಘಟನೆಗಳ ಸಹಯೋಗದೊಂದಿಗೆ ಕಾರ್ಯ ಚಟುವಟಿಕೆಯಲ್ಲಿ ತೊಡಗಿದೆ. ಕೊಡಗು ಜಿಲ್ಲೆಯಲ್ಲಿ ಕಾರ್ಮಿಕ ವರ್ಗ ಕಾನೂನು ಸೌಲಭ್ಯದಿಂದಲೂ ವಂಚಿತವಾಗಿದೆ. ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಚರ್ಚೆಗಳು ನಡೆದು ನಿರ್ಣಯಗಳನ್ನು ರೂಪಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ರೂಪಿಸಲಾಗುವುದು ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಸಮ್ಮೇಳನದ ಗೌರವಾಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕಾರ್ಮಿಕ ವರ್ಗ ಅಸುರಕ್ಷತೆ ನಡುವೆ ಬದುಕು ಸಾಗಿಸುವಂತಾಗಿದೆ, ಆದಿವಾಸಿ ದಲಿತ ಬಡ ವರ್ಗದ ಕಾರ್ಮಿಕ ವರ್ಗ ಕೆಲವೊಂದು ಕಡೆ ಜೀತ ಪದ್ಧತಿ ನಡುವೆ ಬದುಕು ಸಾಗಿಸುವಂತಹ ಆತಂಕಕಾರಿ ಬೆಳವಣಿಗೆ ಕೂಡ ಅಗೋಚರವಾಗಿ ಇರುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸಂಘಟನೆ ಪ್ರಮುಖರಾದ ಹೆಚ್.ಆರ್. ರಮೇಶ್, ಎನ್.ಡಿ. ಕುಟ್ಟಪ್ಪ ಮಾತನಾಡಿದರು. ಸಮ್ಮೇಳನಕ್ಕೂ ಮುನ್ನ ಸಂಘಟನೆ ಧ್ವಜಾರೋಹಣ ನಂತರ ಕ್ರಾಂತಿಕಾರಿಗಳ ಸ್ಮರಣೆ ಮಾಡಲಾಯಿತು. ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷ ವಿ.ಎಸ್. ಸಜಿ, ಸಂಘಟನೆಗಳ ಪ್ರಮುಖರಾದ ಮಹದೇವ್, ಹರಿದಾಸ್ ಕುಸುಮ, ಸುಮಿತ್ರ, ಜಾನಕಿ ಮತ್ತಿತರರು ಇದ್ದರು.
ಸಿಐಟಿಯು ಸಮ್ಮೇಳನ : ಮೆರವಣಿಗೆ
ಸಿ ಐ ಟಿ ಯು ೬ನೇ ಕೊಡಗು ಜಿಲ್ಲಾ ಸಮ್ಮೇಳನದ ಅಂಗವಾಗಿ ಎರಡನೇ ದಿನ ಪ್ರತಿನಿಧಿಗಳು ಕುಶಾಲನಗರ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಚಂಡೆ ವಾದ್ಯಗಳೊಂದಿಗೆ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟ ಬೃಹತ್ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಕುಶಾಲನಗರ ಕಾರು ನಿಲ್ದಾಣದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಸೇರಿದಂತೆ ಪ್ರಮುಖರು ಇದ್ದರು. ನಂತರ ಕುಶಾಲನಗರ ಕಾರು ನಿಲ್ದಾಣ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಿತು.