ವೀರಾಜಪೇಟೆ, ನ. ೨: ಕೊಡಗಿನ ಕೆಂಬಟ್ಟಿ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಅವರನ್ನು ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎಸ್. ಪೊನ್ನಣ್ಣ ನೇತೃತ್ವದಲ್ಲಿ ಕೆಂಬಟ್ಟಿ ಸಮುದಾಯದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕೆಂಬಟ್ಟಿ ಜನಾಂಗವು ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಉಪಜಾತಿಯ ಪಟ್ಟಿಯಲ್ಲಿ ಕೆಂಬಟ್ಟಿ ಜಾತಿಯೆಂದು ನಮೂದಿಸಲು ಮನವಿ ಸಲ್ಲಿಸಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಿ ಇದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬಾರದ ಕಾರಣ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದೆಂದು ಭರವಸೆ ನೀಡಿದರು. ಈ ವೇಳೆ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ನಿಯೋಗ ಬೇಡಿಕೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಸಚಿವರುಗಳಾದ ಎ.ಎಸ್. ಭೋಸರಾಜು, ಬೈರತಿ ಸುರೇಶ್, ಶಿವರಾಜ್ ತಂಗಡಗಿ, ಹಾಗೂ ಕೊಡಗು ಕೆಂಬಟ್ಟಿ ಸಮಾಜದ ಅಧ್ಯಕ್ಷ ಮೊಳ್ಳೆಕುಟ್ಟಂಡ ದಿನು ಬೋಜಪ್ಪ,ಮುಖಂಡರುಗಳಾದ ಗೋವು ಕುಟ್ಟಡ ಅರುಣ್, ಬಿಲ್ಲಿರಿಕುಟ್ಟಡ ಆದರ್ಶ್ ಉತ್ತಪ್ಪ, ಚಟ್ಟಕುಟ್ಟಡ ಅನಂತ್ ಸುಬ್ಬಯ್ಯ, ಚಟ್ಟಕುಟ್ಟಡ ಕಾರ್ತಿಕ್ ಮೊಣ್ಟಪ್ಪ, ದೋಣಕುಟ್ಟಡ ಮಿಲನ್ ಮಂಜಪ್ಪ, ದೋಣಕುಟ್ಟಡ ವಿಜಯ್, ಯಾರಕುಟ್ಟಡ ನವೀನ್ ಸಾಬು, ಚಿಮ್ಮಿಕುಟ್ಟಡ ದರ್ಶನ್ ಮಾದಪ್ಪ, ತಂಬಕುಟ್ಟಡ ಸುಬ್ರಮಣಿ, ಬಣ್ಣಕುಟ್ಟಡ ಜಗದೀಶ್ ಅಪ್ಪಯ್ಯ, ಬೋಮ್ಮಕುಟ್ಟಡ ರವಿ ಸುಬ್ರಮಣಿ, ದೋಣಕುಟ್ಟಡ ಭೀಮಯ್ಯ, ಕೊಟ್ಟಕುಟ್ಟಡ ಭೀಮಣ್ಣಿ, ತಂಬಕುಟ್ಟಡ ಪೂವಪ್ಪ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.