ವೀರಾಜಪೇಟೆ, ನ. ೧: ಕನ್ನಡ ಭಾಷೆಯ ಬಗ್ಗೆ ಅಭಿಮಾನ ಕೇವಲ ಇದೊಂದು ದಿನಕ್ಕೆ ಮಾತ್ರ ಸೀಮಿತವಾಗದೆ, ಸದಾ ಕನ್ನಡಾಭಿಮಾನವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆಯ ಶಾಸಕ ಎ.ಎಸ್. ಪೊನ್ನಣ್ಣ ಕರೆ ನೀಡಿದರು.

ವೀರಾಜಪೇಟೆಯ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತದ ವತಿಯಿಂದ ೭೦ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ಮಾಡಿ ಧ್ವಜವಂದನೆ ಸಲ್ಲಿಸಿ, ಗೌರವ ಸ್ವೀಕರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಸಮಸ್ತ ಕರ್ನಾಟಕದ ಜನತೆ ಇಂದು ಹೆಮ್ಮೆಪಡುವ ದಿನ. ನಮ್ಮ ಭಾಷೆ ನಮ್ಮ ನೆಲ ನಮ್ಮ ಜಲ ಸದಾ ನಮ್ಮೊಂದಿಗಿರುತ್ತದೆ.

ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ, ನದಿಗಳು ಹರಿಯುವ ಸಾಧು-ಸಂತರು-ದಾಸರು- ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ.

ಕನ್ನಡವನ್ನು ಕಲಿಸಿ, ನಾವು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿಹಿಡಿಯಬೇಕು. ಗಡಿನಾಡಾದ ವಿರಾಜಪೇಟೆಯಲ್ಲಿ ಕನ್ನಡ ಭಾಷೆಯನ್ನು ಬಳಸುವುದರ ಮೂಲಕ ಬೆಳೆಸುವಂತಾಗಬೇಕು ಎಂದರು.

ರಾಷ್ಟç ಧ್ವಜಾರೋಹಣಾ ನೆರವೇರಿಸಿದ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪಿ.ಸಿ. ಪ್ರವೀಣ್ ಕುಮಾರ್ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಹಿರಿಯ ಚೇತನಗಳನ್ನು ಸ್ಮರಿಸಿ ಅವರುಗಳನ್ನು ಗೌರವಿಸುವ ದಿನ ಇದಾಗಿದೆ. ಸುಭದ್ರ ಕರ್ನಾಟಕದ ನಿರ್ಮಾಣಕ್ಕೆ ಭದ್ರ ಅಡಿಪಾಯವನ್ನು ಹಾಕಿಕೊಡುವಲ್ಲಿ ಸರ್.ಎಂ ವಿಶ್ವೇಶರಯ್ಯ, ದಿವಾನ್ ಪೂರ್ಣಯ್ಯರಂಥ ಆಡಳಿತಗಾರರ ಪಾತ್ರ ಮಹತ್ವವಾದದ್ದು. ಯಕ್ಷಗಾನ, ನೃತ್ಯ, ನಾಟಕಗಳಲ್ಲಿಯು ಕರ್ನಾಟಕದ ಕೊಡುಗೆ ಅಪಾರ. ಹದಿನಾರನೇ ಶತನಮಾನದವರೆಗಿನ ಕರ್ನಾಟಕದ ಇತಿಹಾಸ ರೋಮಾಂಚನಕಾರಿ ಹಾಗೂ ಸಾಹಸ ಕಥೆಗಳ ಸರಣಿ ಎಂದೇ ತಿಳಿಯಬಹುದಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕನ್ನಡ ಭಾಷೆಗೆ ೨೫೦೦ ವರ್ಷಗಳಿಗೂ ಅಧಿಕ ಇತಿಹಾಸ ಇದೆ. ಭಾಷೆಗೆ ಧಕ್ಕೆ ಬರುವ ರೀತಿಯಲ್ಲಿ ನಾವು ನಡೆದುಕೊಳ್ಳಬಾರದು. ಕನ್ನಡ ಭಾಷೆಯ ಬಗ್ಗೆ ಶ್ರದ್ಧೆ ಭಕ್ತಿ, ಗೌರವ ಇರಬೇಕು. ಪ್ರತಿದಿನವೂ ಕನ್ನಡ ಬಳಸಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ರಾಜೇಶ್ ಪದ್ಮನಾಭ ಮಾತನಾಡಿ, ಕನ್ನಡ ಭಾಷೆ ಹಾಗೂ ಸಾಹಿತ್ಯದ ಹಿರಿಮೆ ವಿಶ್ವವ್ಯಾಪಿಯಾಗಿದ್ದು, ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ ಮುಂತಾದ ಕವಿಗಳು ಕನ್ನಡ ಭಾಷಾ ದೀವಿಗೆಯನ್ನು ಆಗಸದೆತ್ತರಕ್ಕೆ ಬೆಳಗಿಸಿದ್ದಾರೆ ಎಂದರು.

ಗಡಿಭಾಗವಾದ ವೀರಾಜಪೇಟೆಯಲ್ಲಿ ನಾಡಿನ ಸಮಗ್ರ ಮಾಹಿತಿ ಸಂಗ್ರಹಿಸುವ ಹಾಗೂ ಅಧ್ಯಯನಕ್ಕಾಗಿ ರಾಮನಗರದಲ್ಲಿರುವ ಜಾನಪದ ಲೋಕದ ಮಾದರಿಯಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವಂತೆ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ ಶಾಸಕರಿಗೆ ಮನವಿ ಮಾಡಿದರು.

ಅಲ್ಲದೆ ರಾಷ್ಟಿçÃಯ ಹಬ್ಬಗಳಲ್ಲಿ ಸರಕಾರದ ೨೮ ಇಲಾಖೆಗಳ ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸುವಂತಾಗಬೇಕು. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಅವರು ಕೋರಿದರು.

ವಿವಿಧ ಶಾಲೆಗಳ ಎನ್.ಸಿ.ಸಿ, ಸ್ಕೌಟ್ಸ್, ಗೈಡ್ಸ್, ಭಾರತ್ ಸೇವಾದಳ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಪಥಸಂಚಲನದ ಮೂಲಕ ಗೌರವರಕ್ಷೆಯನ್ನು ತಾಲೂಕು ದಂಡಾಧಿಕಾರಿಗಳು, ಶಾಸಕರು ಸ್ವೀಕರಿಸಿದರು. ಪ್ರಥಮ ಗೌರವ ರಕ್ಷೆಯನ್ನು ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಮೋದ್ ನಾಯಕತ್ವದಲ್ಲಿ ಸಲ್ಲಿಸಲಾಯಿತು. ಇದೇ ಸಂದರ್ಭ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಮೆರವಣಿಗೆ ಹಳೆಯ ಶಾಂತ ಚಿತ್ರಮಂದಿರದಿAದ ಹೊರಟು ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ ಮೂಲಕ ತಾಲೂಕು ಮೈದಾನಕ್ಕೆ ಸಾಗಿಬಂತು. ವಿವಿಧ ಶಾಲಾ ಮಕ್ಕಳಿಂದ ಕನ್ನಡದ ಹಿರಿಮೆ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಇದೇ ಸಂದರ್ಭದಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಮಾಜ ಸೇವೆ ಸಲ್ಲಿಸಿದ ಸಾಧಕರುಗಳಾದ ಚೋಕಂಡ ಸಂಜು ಸುಬ್ಬಯ್ಯ ಹಾಗೂ ಶೆಜೋಯ್ ಅವರನ್ನು ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳು ನಾಡಗೀತೆ, ರೈತಗೀತೆ, ಕನ್ನಡ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್, ಪುರಸಭೆ ಉಪಾಧ್ಯಕ್ಷೆ ಫಸಿಹಾ ತಬಸುಂ, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಪುರಸಭೆಯ ಸದಸ್ಯರುಗಳಾದ ಎಸ್.ಎಚ್ ಮತೀನ್, ಮಹಮ್ಮದ್ ರಾಫಿ, ಪಟ್ಟಡ ರಂಜಿ ಪೂಣಚ್ಚ, ರವಿ, ದಿನೇಶ್, ಬೆನ್ನಿ, ಹಮೀದ್, ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಕಂದಾಯ ಇಲಾಖೆಯ ಪರಿವೀಕ್ಷಕ ಎಂ.ಎಲ್. ಹರೀಶ್ ಹಾಗೂ ಸಿಬ್ಬಂದಿ, ಬಗರ್ ಹುಕುಂ ಸಕ್ರಮೀಕರಣ ಸಮಿತಿಯ ಅಧ್ಯಕ್ಷ ಆರ್.ಕೆ. ಸಲಾಂ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ಸರಕಾರಿ ಅಭಿಯೋಜಕ ನರೇಂದ್ರ ಕಾಮತ್, ಎ.ವಿ. ಮಂಜುನಾಥ್, ಶಿಕ್ಷಣ ಇಲಾಖೆಯ ಗೀತಾಂಜಲಿ ಕೆ.ಸಿ. ವಾಮನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.