ಮಡಿಕೇರಿ, ಅ. ೩೧ : ಸ್ವಾತಂತ್ರö್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಹುತಾತ್ಮರಾದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಕೊಡುಗೆ ಮರೆಯಲಾಗದು ಎಂದು ಶಾಸಕದ್ವಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಕೋಟೆ ಆವರಣದಲ್ಲಿನ ಅಪ್ಪಯ್ಯಗೌಡರನ್ನು ಗಲ್ಲಿಗೇರಿಸಿದ ಸ್ಥಳದಲ್ಲಿ ಆಯೋಜಿಸಲಾಗಿದ್ದ ಗುಡ್ಡೆಮನೆಅಪ್ಪಯ್ಯ ಗೌಡರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ; ಕಳೆದ ೧೫ ವರ್ಷಗಳಿಂದ ಅರೆಭಾಷೆ ಅಕಾಡೆಮಿ ಸಹಯೋಗದೊಂದಿಗೆ ಇಂತಹ ಕಾರ್ಯಕ್ರಮ ಆಚರಿಸಿಕೊಂಡು ಬರುತ್ತಿರುವದರಿಂದ ಇತಿಹಾಸವನ್ನು ಸ್ಮರಿಸಿದಂತಾಗುತ್ತದೆ. ಚರಿತ್ರೆಯಲ್ಲಿನ ಇತಿಹಾಸವನ್ನು ಯಾರೂ ಕೂಡ ಮರೆಯಬಾರದು. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಹಾಗಾಗಿ ದೇಶಕ್ಕಾಗಿ ಬಲಿದಾನ ಮಾಡಿದ ಮಹಾನ್ ವ್ಯಕ್ತಿಯ ಸ್ಮರಣೆ ಮಾಡುವದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. ವೀರ ಸೇನಾನಿ ಅಪ್ಪಯ್ಯ ಗೌಡರ ಹೋರಾಟದ ಕೊಡುಗೆಯನ್ನು ಎಂದಿಗೂ ಮರೆಯಲಾಗದು. ಅವರ ಜೀವನ ಚರಿತ್ರೆ ಹಾಗೂ ಹೋರಾಟ., ಬಲಿದಾನದ ಚರಿತ್ರೆಯನ್ನು ಲಾವಣಿ ಮೂಲಕ ಪ್ರಸ್ತುತಪಡಿಸಿದ್ದನ್ನು ಶ್ಲಾಘಿಸಿದ ಶಾಸಕರು; ಇಂತಹ ಲಾವಣಿಯಲ್ಲಿರುವ ಅಂಶಗಳನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಮಕ್ಕಳಿಗೂ ತಿಳಿಹೇಳಬೇಕು. ಹಾಗಾದರೆ ಮಾತ್ರ ಅವರ ಕೊಡುಗೆ ಏನೆಂದು ಆರಿವಾಗುತ್ತದೆ. ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ೧೮೩೭ರ ಕಾಲಘಟ್ಟದಲ್ಲಿ ಪರಿಸ್ಥಿತಿ ಹೇಗಿದ್ದಿರಬಹುದು, ಅಂತಹ ಸಂದರ್ಭದಲ್ಲಿ ಒಂದು ದೊಡ್ಡ ಶಕ್ತಿಯಾಗಿ ಬ್ರಿಟಿಷರ ವಿರುದ್ಧ ಹೋರಾಡಬೇಕೆಂದರೆ ಅವರ ಸಾಮರ್ಥ್ಯ ಅರಿವಾಗುತ್ತದೆ. ಅವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲವೆಂದು ಸ್ಮರಿಸಿದರು.

ತ್ಯಾಗ ಮಾಡಿದವರನ್ನು ಸ್ಮರಿಸಬೇಕು

ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ; ಇದು ಹುತಾತ್ಮರಾದ ಅಪ್ಪಯ್ಯ ಗೌಡರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮವಾಗಿದೆ. ಆದರೆ, ಇಂದು ಒಂದು ದಿನ ಮಾತ್ರ ನೆನಪಿಸಿಕೊಂಡು ಇನ್ನುಳಿದ ೩೬೪ ದಿನಗಳ ಕಾಲ ಮರೆತು ಹೋಗುವಂತಿರಬಾರದು. ಅವರ ಪ್ರತಿಮೆಯನ್ನು ನೋಡಿಯಾದರೂ ಅವರ ಸ್ವಾತಂತ್ರö್ಯ ಹೋರಾಟದ ನೆನಪಾಗಬೇಕು. ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಅಪ್ಪಯ್ಯ ಗೌಡರು ಸೇರಿದಂತೆ ದೇಶಕ್ಕಾಗಿ ತ್ಯಾಗ ಮಾಡಿದ ಫೀ.ಮಾ. ಕಾರ್ಯಪ್ಪ, ಜ.ತಿಮ್ಮಯ್ಯ ಸೇರಿದಂತೆ ಮಹನೀಯರ ಸ್ಮರಣೆ ಮಾಡುವ ಕಾರ್ಯವಾಗಬೇಕು ಎಂದು ಹೇಳಿದರು. ಅಪ್ಪಯ್ಯ ಗೌಡರ ಹೋರಾಟದ ದಿನಗಳನ್ನು ನೆನಪಿಸಿಕೊಂಡ ಶಾಸಕರು, ಅಂದಿನ ಕಾಲದಂತೆ ಇಂದು ಹೋರಾಡಿ ರಕ್ತ ಸುರಿಸುವ ಕಾಲ ಇಲ್ಲ, ಬದಲಿಗೆ ನಮ್ಮ ನಡುವಿನ ಕಚ್ಚಾಟದಲ್ಲಿ ಜೀವನದ ದಾರಿ ತಪ್ಪುತ್ತಿದ್ದೇವೆ. ಹಾಗಾಗಬಾರದು, ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಮರೆಯಬಾರದೆಂದು ಹೇಳಿದರು.

ದೇಶಕ್ಕೆ ಮಾದರಿ

ಜಿಲ್ಲಾಧಿಕಾರಿ ವೆಂಕಟ್ ರಾಜ ಮಾತನಾಡಿ; ಸ್ವಾತಂತ್ರö್ಯ ಹೋರಾಟದ ಇತಿಹಾಸದಲ್ಲಿಯೇ ಅಪ್ಪಯ್ಯ ಗೌಡರದ್ದು ಮೊದಲ ಹೋರಾಟವಾಗಿದೆ, ಅವರನ್ನು ಸ್ಮರಿಸುವ ಕಾರ್ಯಕ್ರಮ ಒಂದು ದಿವಸಕ್ಕೆ ಸೀಮಿತವಾಗಬಾರದು. ಇತಿಹಾಸದ ಪುಟಗಳಲ್ಲಿ ಅವರ ಹೆಸರು ಸೇರಿದೆ, ಇಂತಹ ವಿಚಾರಗಳನ್ನು, ಅವರ ತ್ಯಾಗವನ್ನು ಮುಂದಿನ ಪೀಳಿಗೆಗೆ ತಿಳುವಳಿಕೆ ಮಾಡಿಕೊಡಬೇಕು. ಅವರನ್ನು ಸದಾ ಸ್ಮರಣೆ ಮಾಡಬೇಕೆಂದು ಅಭಿಪ್ರಾಯಿಸಿದರು. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಪ್ಪಯ್ಯ ಗೌಡ ಮೊದಲಾದ ವೀರ ಸೇನಾನಿಗಳು ದೇಶಕ್ಕೆ ಮಾದರಿ. ಅವರು ಮಾಡಿದ ಕೆಲಸ, ನೀಡಿರುವ ಸಂದೇಶ ಉಳಿಯಬೇಕಾದರೆ ವಿವಿಧ ಚಟುವಟಿಕೆಗಳೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಬೇಕೆಂದು ಆಶಿಸಿದರು.

ಸಿನಿಮಾ ಆಗಬೇಕು

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಂಶುಪಾಲ, ಇತಿಹಾಸ ಪ್ರಾಧ್ಯಾಪಕ ನಂಗಾರು ನಿಂಗರಾಜು ನಾಡಿನ ಸ್ವಾತಂತ್ರö್ಯ ಹೋರಾಟದ ಮೆಲುಕಿನೊಂದಿಗೆ ಅಪ್ಪಯ್ಯ ಗೌಡರ ಹೋರಾಟದ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು. ಇನ್ನೂ ಕೂಡ ಪ್ರಥಮ ಸ್ವಾತಂತ್ರö್ಯ ಹೋರಾಟದ ಬಗ್ಗೆ ಸಂಶೋಧನೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟ ಅವರು; ಅಪ್ಪಯ್ಯ ಗೌಡರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಿನಿಮಾ ಕೂಡ ತಯಾರಾಗಬೇಕು ಎಂದು ಸಲಹೆ ನೀಡಿದರು.

ಹುತಾತ್ಮರಿಗೆ ಪುಷ್ಪ ನಮನ-ಮೆರವಣಿಗೆ

ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿ ಇರುವ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಅಕಾಡೆಮಿ ವತಿಯಿಂದ ವಿವಿಧ ಸಮಾಜ, ಸಂಘಟನೆಗಳ ಮಹಿಳೆಯರು, ಮಕ್ಕಳಿಂದ ಅಪ್ಪಯ್ಯ ಗೌಡರ ಕುರಿತಾದ ಹಾಡು, ಲಾವಣಿ ಪದಗಳನ್ನು ಹಾಡಿ ಸ್ಮರಣೆ ಮಾಡಲಾಯಿತು.

ನಂತರ ಈರ್ವರು ಶಾಸಕರು ಗಳಾದಿಯಾಗಿ ಸಮುದಾಯದ ಪ್ರಮುಖರು, ಸಾರ್ವಜನಿಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಕೋಟೆ ಆವರಣದವರೆಗೆ ಸಾಗಿದರು. ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳ ಬ್ಯಾಂಡ್‌ಸೆಟ್ ಹಾಗೂ ಸಂತ ಮೈಕಲ್ಲರ ಶಾಲೆಯ ಎನ್‌ಸಿಸಿ ತಂಡದವರು ಗೌರವ ನಮನ ಸಲ್ಲಿಸುವದರೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದರು. ಕೋಟೆ ಆವರಣದಲ್ಲಿರುವ ಅಪ್ಪಯ್ಯ ಗೌಡರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ¸ಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಜಿ.ಮೋಹನ್‌ದಾಸ್, ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ವರಿಷ್ಠಾಧಿಕಾರಿ ಬಾರಿಕೆ ದಿನೇಶ್‌ಕುಮಾರ್, ಡಿವೈಎಸ್‌ಪಿ ಸೂರಜ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಕಾರ್ಯದರ್ಶಿ ಪೇರಿಯನ ಉದಯ, ಕರ್ನಾಟಕ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳಾದ ಲಕ್ಷಿö್ಮನಾರಾಯಣ ಕಜೆಗದ್ದೆ, ಕೊಲ್ಯದ ಗಿರೀಶ್, ಅಕಾಡೆಮಿ ರಿಜಿಸ್ಟಾçರ್ ಚಿನ್ನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್, ವಿವಿಧ ಗೌಡ ಸಮಾಜಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅಪ್ಪಯ್ಯ ಗೌಡರ ಕುರಿತಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಡಿಕೇರಿಯ ಸಂತ ಮೈಕಲರ ಶಾಲೆಯ ಕೆ.ಎಫ್. ಸ್ನೇಹ ಪ್ರಥಮ, ಸಂತ ಜೋಸೆಫರ ಶಾಲೆಯ ಲ್ಯಾನ್ಸಿ ಪೊನ್ನಮ್ಮ ದ್ವಿತೀಯ, ಅದೇ ಶಾಲೆಯ ರಿಧಿ ಎಸ್. ನಾಯಕ್ ತೃತೀಯ ಬಹುಮಾನ ಪಡೆದುಕೊಂಡರು.

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಸ್ವಾಗತಿಸಿದರೆ, ಸದಸ್ಯ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು. ಅಪ್ಪಯ್ಯ ಗೌಡರ ಕುರಿತಾಗಿ ಕರ್ಣಯ್ಯನ ಕೃಷಿಕ ಮಂದಣ್ಣ ರಚಿಸಿರುವ ಲಾವಣಿ ಪದವನ್ನು ಚೊಕ್ಕಾಡಿ ಪ್ರೇಮಾ ರಾಘವಯ್ಯ ಹಾಗೂ ಮಡ್ಡೇಂಗಲ ರುಕ್ಮಿಣಿ ದುಗ್ಗಪ್ಪ ಪ್ರಸ್ತುತಪಡಿಸಿದರು.