ಮಡಿಕೇರಿ, ಅ.೩೧: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ನಾಗರಹೊಳೆಯಲ್ಲಿ ೧.೮೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ ಶಾಲೆಯ ನವೀಕೃತ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
ಬಳಿಕ ಶಾಲಾ ಕೊಠಡಿ ವೀಕ್ಷಿಸಿದ ಸಚಿವರು ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದರು. ಶಿಕ್ಷಕರು ಪಾಠ ಪ್ರವಚನ ಮನ ಮುಟ್ಟುವಂತೆ ಹೇಳುತ್ತಿದ್ದಾರೆಯೇ, ಪ್ರತಿನಿತ್ಯ ಆಹಾರದ ಪಟ್ಟಿಯಂತೆ ಊಟೋಪಾಚಾರ ಕಲ್ಪಿಸಲಾಗುತ್ತಿದೆಯೇ, ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಿಸಲಾಗುತ್ತಿದೆಯೇ... ಎಂದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು, ಸರ್ಕಾರದ ಸವಲತ್ತು ಸರಿಯಾಗಿ ಬಳಸಿಕೊಳ್ಳಬೇಕು. ಸಮಸ್ಯೆ ಇದ್ದಲ್ಲಿ ಅಧಿಕಾರಿಗಳ ಗಮನ ಸೆಳೆಯಬೇಕು ಎಂದು ಸಚಿವರು ಸಲಹೆ ನೀಡಿದರು. ನಂತರ ವಿದ್ಯಾರ್ಥಿಗಳು ಮಲಗುವ ಕೊಠಡಿ, ಆಹಾರ ಸಾಮಗ್ರಿ ಕೊಠಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಹಿಂದೆ ವಸತಿ ಶಾಲೆಯಲ್ಲಿ ಕುಂದು ಕೊರತೆಗಳು ಇತ್ತು. ೪ಆರನೇ (ಮೊದಲ ಪುಟದಿಂದ) ಆ ನಿಟ್ಟಿನಲ್ಲಿ ೧.೮೦ ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನವೀಕರಣ ಜತೆಗೆ, ಹೆಚ್ಚುವರಿ ಕೊಠಡಿ ನಿರ್ಮಾಣ, ಸೋಲಾರ್ ಅಳವಡಿಕೆ, ಆಟದ ಮೈದಾನ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಸೇರಿದಂತೆ ಹಲವು ಕೆಲಸ ಕೈಗೊಳ್ಳಲಾಗಿದೆ ಎಂದು ಎನ್.ಎಸ್. ಭೋಸರಾಜು ತಿಳಿಸಿದರು.
ವಸತಿ ಶಾಲೆಯಲ್ಲಿ ಇನ್ನೂ ಆಗಬೇಕಿರುವ ಕೆಲಸಗಳಿಗೆ ಐಟಿಡಿಪಿ ಇಲಾಖೆಯಿಂದ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಗಮನ ಹರಿಸುವುದು ಶಿಕ್ಷಕರು ಹಾಗೂ ಅಧಿಕಾರಗಳ ಜವಾಬ್ದಾರಿ ಆಗಿದೆ ಎಂದು ಸಚಿವರು ತಾಕೀತು ಮಾಡಿದರು.
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಆ ನಿಟ್ಟಿನಲ್ಲಿ ಎಲ್ಲರಂತೆ ಆದಿವಾಸಿ ಮಕ್ಕಳು ಮುಖ್ಯವಾಹಿನಿಗೆ ಬರಬೇಕು ಎಂದರು.
ವಸತಿ ಶಾಲೆಯಲ್ಲಿ ಇನ್ನೂ ಆಗಬೇಕಿರುವ ಕೆಲಸ ಕೈಗೊಳ್ಳಲಾಗುವುದು ಎಂದು ಎ.ಎಸ್.ಪೊನ್ನಣ್ಣ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಇಲ್ಲಿನ ಆದಿವಾಸಿಗಳು ವಿದ್ಯಾರ್ಥಿಗಳಿಗೆ ಆಟದ ಮೈದಾನ, ಶಿಕ್ಷಕರಿಗೆ ವಸತಿ ಗೃಹ, ರೈಲ್ವೆ ಬ್ಯಾರಿಕೇಡ್‌ಗೆ ಕಬ್ಬಿಣದ ಪರದೆ ಅಳವಡಿಸುವುದು ಸೇರಿದಂತೆ ಇನ್ನೂ ಹಲವು ಕೆಲಸಗಳು ಆಗಬೇಕಿದೆ ಎಂದು ಗಮನ ಸೆಳೆದರು. ಹಾಗೆಯೇ ನಾಗರಹೊಳೆ ವ್ಯಾಪ್ತಿಯಲ್ಲಿ ಬಾಕಿ ಇರುವ ಆದಿವಾಸಿ ಕುಟುಂಬಗಳಿಗೆ ಅರಣ್ಯ ಹಕ್ಕು ಪತ್ರ ವಿತರಿಸುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ವಿದ್ಯಾರ್ಥಿಗಳಿಗೆ ಆಟದ ಸಾಮಗ್ರಿಯನ್ನು ಸಚಿವರು ವಿತರಿಸಿದರು.
ನಾಲ್ಕೇರಿ ಗ್ರಾ.ಪಂ.ಅಧ್ಯಕ್ಷ ಜೆ.ಎಂ.ಸೋಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಆರ್.ಜಿ.ಸಚಿನ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತೇಜರಾದ ಬಿ. ಹಲಸಬಾಳ ಇತರರು ಇದ್ದರು.