ಮಡಿಕೇರಿ, ಅ, ೩೧: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೊಡಗು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಡಗು, ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಬಾಲ ಭವನದಲ್ಲಿ ವಿಶ್ವ ಹಾಸ್ಪಿಸ್ ಮತ್ತು ಉಪಶಮನ ಆರೈಕೆ ದಿನಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಡಿ.ಹೆಚ್.ಓ ಡಾ. ಸತೀಶ್ ಕುಮಾರ್ ಕೆ.ಎಂ. ಉದ್ಘಾಟಿಸಿ ಜೀವನದ ಕೊನೆಯ ದಿನಗಳನ್ನು ಎಣಿಸುತ್ತಿರುವ ರೋಗಿಗಳಿಗೆ ಉತ್ತಮ ಜೀವನವನ್ನು ನಡೆಸಲು ಸೇವೆಯನ್ನು ನೀಡುವುದೇ ಉಪಶಮನ ಆರೈಕೆ ಎಂದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವಿಮಲ ಕೆ. ಜಿ. ಮಾತನಾಡಿ, ಜೀವನದ ಕೊನೆಯ ಹಂತದಲ್ಲಿರುವ ರೋಗಿಗಳಿಗೆ ನೆಮ್ಮದಿಯಾಗಿ ಮತ್ತು ಮಾನಸಿಕ ನೆಮ್ಮದಿಯೊಂದಿಗೆ ತಮ್ಮ ಕೊನೆಯ ದಿನಗಳನ್ನು ಕಳೆಯುವಲ್ಲಿ ಸಮಾಜ ಹಾಗೂ ಮನೆಯವರು ಸಹಕರಿಸುವಂತೆ ಮಾಡುವುದೇ ಉಪಶಮನ ಆರೈಕೆಯ ಉದ್ದೇಶ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ರವೀಂದ್ರ ರೈ ಮಾತನಾಡಿ, ಉಪಶಮನ ಆರೈಕೆಯ ಮೂಲಕ ಸಮಾಜಕ್ಕೆ ಉತ್ತಮ ಆರೋಗ್ಯ ಸೇವೆಯನ್ನು ನಾವೆಲ್ಲರೂ ಸೇರಿ ಒದಗಿಸೋಣ. ಈ ಕಾರ್ಯಕ್ರಮಕ್ಕೆ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಯೂತ್ ಮೂವ್‌ಮೆಂಟ್ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀ ಅಜಯ್ ಸೂದ್ ವಹಿಸಿದ್ದರು. ಮರಣ ಎಂಬುದು ಎಲ್ಲರಿಗೂ ಬರುತ್ತದೆ. ಆದರೆ ಆ ಮರಣದ ದಿನಗಳನ್ನು ರೋಗಿಯು ಉತ್ತಮ ರೀತಿಯಲ್ಲಿ ಕಳೆಯಬೇಕು ಎಂಬುದೇ ಉಪಶಮನ ಆರೈಕೆಯ ಮುಖ್ಯ ಉದ್ದೇಶ ಎಂದರು. ಕಾರ್ಯಕ್ರಮದ ಕುರಿತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಉಪಶಮನ ಆರೈಕೆ ಕಾರ್ಯಕ್ರಮದ ಹಿರಿಯ ವೈದ್ಯಾಧಿಕಾರಿ ಡಾ. ವಿಭಾ ಎಸ್. ಪಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ೮೦ಕ್ಕೂ ಮಂದಿ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಶ್ರೀನಿವಾಸ್ ಬಿ.ಎಲ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇ. ಡಾ. ರಾಘವ ಬಿ. ಭಾಗವಹಿಸಿದ್ದರು. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕರಾದ ಅಂಕಾಚಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.