ವೀರಾಜಪೇಟೆ, ಅ. ೨೯: ಇಲ್ಲಿನ ರೋಟರಿ ಕ್ಲಬ್‌ನ ಸಭೆ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ರೋಟರಿ ಗವರ್ನರ್ ರಾಮಕೃಷ್ಣ ಮಾತನಾಡಿ, ಎಲ್ಲರು ನಾಯಕನಾಗಲು ಸಾಧ್ಯವಿಲ್ಲ, ಕೆಲವರಲ್ಲಿ ನಾಯಕನ ಗುಣ ಇದ್ದರೂ ಯಾವುದೇ ಸಾಮಾಜಿಕ ಕಾರ್ಯವನ್ನು ಮಾಡದೇ ಇದ್ದರೆ ಅಂತವರು ನಾಯಕನಾಗಲು ಸಾಧ್ಯವಿಲ್ಲ, ನಾನು ಮಾಡಿದ ಕಾರ್ಯವನ್ನು ಗುರುತಿಸಿ ಸಾರ್ವಜನಿಕರೆ ನಮ್ಮನ್ನು ಗುರುತಿಸಿದರೆ ಮಾತ್ರ ನಾಯಕರಾಗಲು ಸಾಧ್ಯ ಎಂದರು.
ಜಿಲ್ಲಾ ಸಹಾಯಕ ಗವರ್ನರ್ ದಿಲನ್ ಗಣಪತಿ ಕಳೆದ ಆರು ತಿಂಗಳ ತಮ್ಮ ಅವಧಿಯಲ್ಲಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ವೈದ್ಯ ಪಕ್ಷಿ ತಜ್ಞ , ಮೂರು ಬಾರಿ ಲಿಮ್ಕಾ ಬುಕ್‌ನಲ್ಲಿ ದಾಖಲೆ ಮಾಡಿದ ರೋಟರಿ ಕ್ಲಬ್ ಸದಸ್ಯ ಡಾ. ನರಸಿಂಹನ್ ಹಾಗೂ ಉತ್ತಮ ಗ್ರಂಥ ಪಾಲಕಿ ಪ್ರಶಸ್ತಿಗೆ ಭಾಜನರಾದ ಪ್ರೊ. ವಿಜಯಲತ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ. ಮಾದಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕಿದೆ ಸದಸ್ಯರ ಸಹಕಾರ ಮುಖ್ಯ ಎಂದರು.