ಕಣಿವೆ, ಅ. ೨೯: ಕುಶಾಲನಗರ ಪಟ್ಟಣದಲ್ಲಿರುವ ಕೆಲವು ಬೀಡಾಡಿ ದನಗಳ ಪಾಲಿಗೆ ಸ್ಥಳೀಯ ಪುರಸಭೆಯ ಉದ್ಯಾನ ಮೇವಿನ ತಾಣವಾಗಿ ಮಾರ್ಪಟ್ಟಿದೆ. ಪಟ್ಟಣದಲ್ಲಿ ಇರುವ ಸರಿಸುಮಾರು ೭೦ಕ್ಕೂ ಹೆಚ್ಚಿನ ಬಡಾವಣೆಗಳ ಪೈಕಿ ಏಕೈಕ ಉದ್ಯಾನವನವಾದ ಕಾವೇರಿ ಬಡಾವಣೆಯ ಈ ಉದ್ಯಾನ ಹೇಳೋರು ಕೇಳೋರು ಇಲ್ಲದೆ ಹುಲ್ಲುಗಾವಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ರೂ.೨೦ ಲಕ್ಷ ವೆಚ್ಚದಲ್ಲಿ ೧೫ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಉದ್ಯಾನ ಇಂದು ಪುರಸಭೆಯ ಅವಕೃಪೆಗೆ ಸಿಲುಕಿದೆ. ಈ ಉದ್ಯಾನದ ಆರಂಭದಲ್ಲಿ ಅಳವಡಿಸಿದ್ದ ಕೆಲವು ಗಿಡಗಳು ಹೊರತಾಗಿಸಿ ಇದುವರೆಗೂ ಪುರಸಭೆ ಒಂದೇ ಒಂದು ಗಿಡ ನೆಟ್ಟು ಬೆಳೆಸಲಿಲ್ಲ.

ಉದ್ಯಾನದೊಳಗೆ ನಿರ್ಮಿಸಿದ ಹುಲ್ಲುಹಾಸು ನಿರ್ವಹಣೆ ಇಲ್ಲದೆ ಕಾಡು ಗಿಡಗಳಿಂದ ಆವೃತವಾಗಿದೆ. ಆದ್ದರಿಂದಲೇ ಈ ಕಾಡು ಸಸ್ಯಗಳು ಬೀಡಾಡಿ ದನಗಳನ್ನು ತನ್ನತ್ತ ಆಕರ್ಷಿಸುವಂತಾಗಿದೆ. ಇಲ್ಲಿ ಆರಂಭದಲ್ಲಿ ಅಳವಡಿಸಿದ್ದ ಯಾಂತ್ರಿಕ ಕೊಳವೆ ಬಾವಿಯಲ್ಲಿ ನೀರಿಲ್ಲದ ಕಾರಣ ವಿದ್ಯುತ್ ಪರಿಕರಗಳು ಹಾಳಾಗಿವೆ. ವಾಯುವಿಹಾರಕ್ಕೆ ಆಗಮಿಸುವವರು ವಿರಮಿಸಲು ಅಳವಡಿಸಿದ್ದ ಕಾಂಕ್ರೀಟ್ ಬೆಂಚುಗಳು ಮುರಿದು ಬಿದ್ದಿವೆ. ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದ ಇಂಟರ್ ಲಾಕ್‌ಗಳು ಕಿತ್ತು ಹೋಗಿವೆ. ಇನ್ನು ಉದ್ಯಾನದ ಸುತ್ತಲೂ ಅಳವಡಿಸಿದ ತಂತಿಬೇಲಿಯೂ ಕೂಡ ನಿರ್ವಹಣೆ ಇಲ್ಲದೇ ತುಕ್ಕು ಹಿಡಿದಿದೆ. ಸಾರ್ವಜನಿಕರು ಉದ್ಯಾನವನಕ್ಕೆ ಪ್ರವೇಶಿಸಲು ಅಳವಡಿಸಿರುವ ಕಬ್ಬಿಣದ ಗೇಟನ್ನು ಹಾಕಿ ತೆಗೆಯದ ಕಾರಣ ಹಾಗೆಯೇ ಬಿಡುವ ಪರಿಣಾಮ ಬೀಡಾಡಿ ದನಗಳು ಸಲೀಸಾಗಿ ಉದ್ಯಾನದೊಳಗೆ ತೆರಳಿ ಮೇಯುತ್ತಿವೆ.

ಬಳಕೆಯಾಗುತ್ತಿರುವ ರೋಟರಿ ಪರಿಕರಗಳು

ಈ ಉದ್ಯಾನದೊಳಗೆ ಒಂದು ಭಾಗದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯವರು ಅಳವಡಿಸಿರುವ ಕೆಲವು ಆಟಿಕೆ ಪರಿಕರಗಳು, ವ್ಯಾಯಾಮದ ಸಾಧನಗಳು ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ದರಿಗೆ ನೆರವಾಗುತ್ತಿವೆ. ಸ್ಥಳೀಯ ಜನಹಿತ ಕಡೆಗಣಿಸಿರುವ ಪುರಸಭೆಗೆ ಹೋಲಿಸಿದಲ್ಲಿ ರೋಟರಿ ಸಂಸ್ಥೆಯ ಕೊಡುಗೆ ಇಲ್ಲಿ ಶ್ಲಾಘನೀಯ.

ವಿದ್ಯುತ್ ದೀಪ ಅಳವಡಿಕೆಯಾಗಲಿ

ಈ ಉದ್ಯಾನದೊಳಗೆ ಸಂಜೆ ಹಾಗೂ ರಾತ್ರಿ ವೇಳೆ ವಾಯು ವಿಹಾರಿಗಳ ಅನುಕೂಲಕ್ಕಾಗಿ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಕಲ್ಪಿಸಲು ಪುರಸಭೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ಏಕೆಂದರೆ, ಕತ್ತಲೆ ತುಂಬಿದ ಉದ್ಯಾನ ರಾತ್ರಿ ವೇಳೆ ಕೆಲವು ಕಾಮಾಂಧರ ಆಶ್ರಯತಾಣವಾಗುತ್ತಿರುವ ಬಗ್ಗೆ ದೂರುಗಳಿದ್ದು ಕೂಡಲೇ ಇತ್ತ ಪುರಸಭೆ ಗಮನಿಸಬೇಕಿದೆ.

ಈ ಉದ್ಯಾನದ ಸುತ್ತಲೂ ಇರುವ ಗಿಡ ಮರಗಳ ರೆಂಬೆಗಳನ್ನು ಕಡಿದು ನಿರ್ವಹಣೆ ಮಾಡಿದಲ್ಲಿ ಈ ಉದ್ಯಾನ ಇನ್ನಷ್ಟು ಮಂದಿಗೆ ಉಪಯೋಗವಾಗುತ್ತದೆ. ಹಾಗಾಗಿ ಅನೈತಿಕ ಚಟುವಟಿಕೆಗಳಿಗೆ ಆಸ್ಪದವಿಲ್ಲದಂತೆ ಆಗುತ್ತದೆ ಎಂಬುದು ಸ್ಥಳೀಯರ ಆಶಯವೂ ಆಗಿದೆ.

- ಕೆ.ಎಸ್. ಮೂರ್ತಿ