ಮಡಿಕೇರಿ, ಅ. ೨೯: ನಿಗೂಢವಾಗಿ ನಾಪತ್ತೆಯಾಗಿದ್ದ ವ್ಯಕ್ತಿ ೧೭ ದಿನಗಳ ನಂತರ ಪತ್ತೆಯಾಗಿದ್ದು, ಅಸ್ವಸ್ಥಗೊಂಡಿರುವ ಯುವಕ ಜಿಲ್ಲಾಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾನೆ.
ದೇವಸ್ತೂರು ನಿವಾಸಿ ಕೆಂಚಪ್ಪ ಎಂಬವರ ಪುತ್ರ ಎಸ್.ಕೆ. ಕೀರ್ತನ್ (೩೨) ತಾ. ೧೨ರ ರಾತ್ರಿ ಮನೆಯಲ್ಲಿ ಪೋಷಕರೊಂದಿಗೆ ಟಿವಿ ನೋಡಿ ಮಲಗಿದ್ದು, ಮರುದಿನ ಬೆಳಿಗ್ಗೆ ೮.೩೦ಕ್ಕೆ ಕೀರ್ತನ್ ಮಲಗಿದ್ದ ಕೋಣೆಗೆ ತೆರಳಿ ನೋಡಿದಾಗ ನಾಪತ್ತೆಯಾಗಿದ್ದಾನೆ. ಅಕ್ಕಪಕ್ಕದ ನಿವಾಸಿಗಳು, ಬಂಧುಗಳನ್ನು ವಿಚಾರಿಸಿದ ಸಂದರ್ಭ ಸುಳಿವು ಲಭ್ಯವಾಗದ ಹಿನ್ನೆಲೆ ತಾ. ೧೩ ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಪೋಷಕರು ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.
ಸ್ಥಳೀಯ ಯುವಕರು ಎಷ್ಟೆ ಹುಡುಕಾಟ ನಡೆಸಿದರೂ ಕೀರ್ತನ್ ಸುಳಿವು ಲಭ್ಯವಾಗುತ್ತಿರಲಿಲ್ಲ. ಅನುಮಾನಗೊಂಡು ಹೊಳೆಯಲ್ಲಿಯೂ ಅಗ್ನಿಶಾಮಕ ದಳದ ಸಹಾಯದೊಂದಿಗೆ ಹುಡುಕಾಟ ಮಾಡಲಾಗಿತ್ತು. ಪೊಲೀಸರು ನಾಪತ್ತೆ ಕುರಿತು ಪ್ರಕಟಣೆ ಹೊರಡಿಸಿದ್ದರು. ಬುಧವಾರದಂದು ಮುಟ್ಲು-ಹಮ್ಮಿಯಾಲ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವಕನನ್ನು ಗಮನಿಸಿದ ಸ್ಥಳೀಯ ಚಾಲಕರು ದೇವಸ್ತೂರು ಭಾಗದ ಯುವಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ತೆರಳಿ ನೋಡಿದಾಗ ಮಾಂದಲಪಟ್ಟಿ ಗೇಟ್‌ನತ್ತ ಯುವಕ ನಡೆದುಕೊಂಡು ಬರುತ್ತಿರುವುದು ಕಂಡುಬAದಿದೆ. ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿ ನಿತ್ರಾಣಗೊಂಡಿದ್ದ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಕಾಡಿನಲ್ಲಿ ಕೀರ್ತನ್?
ನಾಪತ್ತೆಯಾಗಿರುವ ಕೀರ್ತನ್ ಸಮರ್ಪಕ ಮಾಹಿತಿಯನ್ನು ನೀಡುತ್ತಿಲ್ಲ. ಕೇಳಿದರೆ ಕಾಡಿನಲ್ಲಿದ್ದೆ, ಅಲ್ಲಿ ದಾರಿತಪ್ಪಿ ಓಡಾಡಿದ್ದೇನೆ ಎಂದು ಅಸ್ಪಷ್ಟ ವಿಷಯವನ್ನು ಹೇಳುತ್ತಿದ್ದು, ಚಿಕಿತ್ಸೆ ಬಳಿಕ ಸ್ಪಷ್ಟ ಮಾಹಿತಿಯನ್ನು ಪಡೆಯಲು ಪೊಲೀಸರು ಮುಂದಾಗಿದ್ದಾರೆ.
ಮನೆಯಿಂದ ಹೋಗುವ ಸಂದರ್ಭ ಬ್ಯಾಗ್‌ನಲ್ಲಿ ಪ್ಯಾಂಟ್, ಜಾಕೆಟ್, ಟಾರ್ಚ್ ಹಾಗೂ ಚಿಕ್ಕದಾದ ಟೆಂಟ್ ಮಾತ್ರ ಕೊಂಡೊಯ್ದಿದ್ದು, ಕಾಡಿನ ಮಧ್ಯೆ ಇಷ್ಟು ದಿನ ಇದ್ದ ಅನುಮಾನವಿದೆ. ಆದರೆ, ಆಹಾರವಿಲ್ಲದೆ ಇಷ್ಟೊಂದು ದಿನ ಕಾಡಿನಲ್ಲಿ ಇರುವುದಾದರು ಹೇಗೆ? ಎಂಬ ಪ್ರಶ್ನೆಯೂ ಕಾಡುತ್ತಿದೆ.
 
						