ಕಣಿವೆ, ಅ. ೨೯: ಶ್ವಾನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಸಂಚಕಾರವಾಗುತ್ತಿದೆ. ಮಕ್ಕಳು ಹಾಗೂ ಮಹಿಳೆಯರ ಪಾಲಿಗೆ ಬೀಡಾಡಿ ಶ್ವಾನಗಳು ಭೀತಿ ಮೂಡಿಸುತ್ತಿವೆ ಎಂಬುದು ಸಾಮಾನ್ಯವಾಗಿ ಕುಶಾಲನಗರ ಮಾತ್ರವಲ್ಲ, ಎಲ್ಲೆಡೆಗಳಲ್ಲೂ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ಕೇಳಿ ಬರುತ್ತಿರುವ ದೂರು.

ಆದರೆ, ಈ ಧರೆಯ ಮೇಲೆ ಮನುಷ್ಯ ಸೇರಿದಂತೆ ಬೇರೆಲ್ಲಾ ಪ್ರಾಣಿಗಳು ಬದುಕುವ ಹಕ್ಕಿದೆ ಎಂದು ಸಂವಿಧಾನವೇ ಹೇಳಿದೆ. ಹಾಗಾಗಿ ಹಿಂದಿನ ಹಾಗೆ ಬೀಡಾಡಿ ಬೀದಿ ಶ್ವಾನಗಳನ್ನು ಹಿಡಿದು ಅಮಾನುಷವಾಗಿ ಕೊಲ್ಲುವಂತಿಲ್ಲ. ಹಿಂಸಿಸುವAತೆಯೂ ಇಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡುವ ಶ್ವಾನ ಪಡೆಯನ್ನು ಹಿಡಿದಿಟ್ಟು ಪ್ರತ್ಯೇಕವಾಗಿ ಸಾಕುವ, ಅವುಗಳಿಗೆ ಅನ್ನಾಹಾರ ನೀಡುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳದ್ದು ಎಂದು ಪ್ರಾಣಿದಯಾ ಸಂಘ ಹೇಳುತ್ತದೆ.

ಈ ನಡುವೆ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚಿರುವ ಶ್ವಾನಗಳ ಹಾವಳಿಗೆ ನಿಯಂತ್ರಣ ಹೇರುವ ಅಗತ್ಯವಿದೆ. ಕುಶಾಲನಗರ ಪಟ್ಟಣದಲ್ಲಿ ಅದರಲ್ಲೂ ಪಟ್ಟಣದ ಮುಳ್ಳುಸೋಗೆ ಬಳಿಯ ಹಾಸನ ರಾಜ್ಯ ಹೆದ್ದಾರಿಯ ನಡುವಲ್ಲಿ ಸರಿ ಸುಮಾರು ೨೦ಕ್ಕೂ ಹೆಚ್ಚಿನ ಶ್ವಾನಪಡೆ ಗುಂಪಾಗಿ ಕಾಣಿಸಿಕೊಂಡು ವಾಯು ವಿಹಾರಿಗಳಿಗೆ ಭೀತಿ ಮೂಡಿಸಿದ ಪ್ರಸಂಗ ಕಂಡು ಬಂತು. ೧೫ ರಿಂದ ೨೦ ರಷ್ಟಿದ್ದ ಗಂಡು ಶ್ವಾನಗಳಿಗೆ ಆಕಸ್ಮಿಕವೋ ಏನೋ ಸಿಕ್ಕಿ ಹಾಕೊಂಡು ಹೆಣ್ಣು ನಾಯಿಯೊಂದರ ಪಾಡು ಹೇಳತೀರದಾಗಿತ್ತು. ಅಷ್ಟೇ ಅಲ್ಲ, ವಾಹನ ಸಂಚಾರಕ್ಕೂ ಈ ಶ್ವಾನಪಡೆ, ಅಡ್ಡಲಾಗಿ ಕೋಟೆ ಕಟ್ಟಿದಂತೆ ಹೆದ್ದಾರಿಯ ನಡುವೆಯೇ ನಿರ್ಭೀತಿಯಿಂದ ಸಾಗುತ್ತಿದ್ದುದು ಕಂಡು ಬಂತು.

ಸAತಾನ ಹರಣ ಮಾಡಿಸದೇ ಪುರಸಭೆ ನಿರ್ಲಕ್ಷ್ಯ

ಪಂಚಾಯಿತಿ ವ್ಯಾಪ್ತಿಯಲ್ಲಿನ ಬೀಡಾಡಿ ಶ್ವಾನಗಳ ಸಂತಾನ ಹರಣ ಮಾಡಿಸಬೇಕಾದುದು ಸ್ಥಳೀಯ ಪಂಚಾಯಿತಿಗಳ ಆದ್ಯ ಕರ್ತವ್ಯವಾಗಿದೆ. ಆದರೆ ಪಂಚಾಯಿತಿ ಅಧಿಕಾರಿಗಳು ಕರ್ತವ್ಯದಲ್ಲಿ ಬೇಜವಬ್ದಾರಿ ತೋರುವ ಮೂಲಕ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗುವಂತಾಗಿದೆ. ಪಂಚಾಯಿತಿಗಳಲ್ಲಿ ಅನುದಾನ ವಿದ್ದರೂ ಕೂಡ ಶ್ವಾನಗಳ ಸಂತಾನ ಹರಣಕ್ಕೆ ಟೆಂಡರ್ ಕರೆಯದೇ ಕಾಲಹರಣ ಮಾಡುವ ಪುರಸಭೆ ಅಧಿಕಾರಿಗಳ ನಿರ್ಲಕ್ಷö್ಯ ಶ್ವಾನಗಳ ಹೆಚ್ಚಳಕ್ಕೆ ಕಾರಣವಾಗಿದೆ.

ಕುಶಾಲನಗರದ ಖಾಸಗಿ ವೈದ್ಯರಿಂದ ಸಂತಾನ ಹರಣ

ಪಟ್ಟಣದಲ್ಲಿ ಇರುವ ಖಾಸಗಿ ವೈದ್ಯ ಡಾ. ಸಿದ್ದುಪ್ರಕಾಶ್ ಅವರು ಶ್ವಾನಪ್ರಿಯರಾಗಿದ್ದು ಸುಮಾರು ೩೦ಕ್ಕೂ ಹೆಚ್ಚಿನ ಬೀಡಾಡಿ ಶ್ವಾನಗಳನ್ನು ಸಾಕುವ ಮೂಲಕ ಅವುಗಳ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಇವರ ಬಳಿ ಇರುವ ಶ್ವಾನಗಳನ್ನು ಮೈಸೂರಿಗೆ ಒಯ್ದು ಸಂತಾನ ಹರಣ ಚಿಕಿತ್ಸೆ ಮಾಡಿಸಿ ಶ್ವಾನವೊಂದಕ್ಕೆ ಗರಿಷ್ಠ ೪ ರಿಂದ ೫ ಸಾವಿರ ರೂಪಾಯಿಗಳನ್ನು ತಮ್ಮ ಕಿಸೆಯಿಂದ ಭರಿಸುತ್ತಿದ್ದಾರೆ. ಆದರೆ ಒಂದು ಪಂಚಾಯಿತಿ ಆಡಳಿತ ಸಂತಾನ ಹರಣ ಚಿಕಿತ್ಸೆ ಮಾಡಿಸಲು ಖಜಾನೆಯಲ್ಲಿ ಸರ್ಕಾರದ ಹಣವನ್ನು ಇಟ್ಟುಕೊಂಡು ಕಾಲಹರಣ ಮಾಡುತ್ತಿರುವ ಕಾರಣ ಕುಶಾಲನಗರದಲ್ಲಿ ಶ್ವಾನಗಳ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಕೇಂದ್ರದ ಮಾಜಿ ಸಚಿವರೂ ಆಗಿರುವ ಪ್ರಾಣಿ ದಯಾ ಸಂಘ ನಿರ್ವಹಿಸುತ್ತಿರುವ ಮೇನಕಾ ಗಾಂಧಿ ಅವರು ಕುಶಾಲನಗರ ಪುರಸಭೆ ಅಧಿಕಾರಿಗಳಿಗೆ ಕರೆ ಮಾಡಿ, ಬೀಡಾಡಿ ಶ್ವಾನಗಳನ್ನು ಸೆರೆ ಹಿಡಿದು ಅವುಗಳಿಗೆ ಹಿಂಸೆ ನೀಡಿದರೆ ಅಥವಾ ಕೊಂದರೆ ತಮ್ಮ ಮೇಲೆ ದೂರು ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಅತ್ತ ಪ್ರಾಣಿ ದಯಾ ಸಂಘದ ನಿಯಮಗಳನ್ನು ಪಾಲಿಸಬೇಕು. ಇತ್ತ ಶ್ವಾನಗಳ ಹಾವಳಿಯ ವಿರುದ್ಧ ದೂರು ನೀಡುವ ಸಾರ್ವಜನಿಕರಿಗೂ ಸ್ಪಂದಿಸುವ ಮೂಲಕ ಮಕ್ಕಳು ಮಹಿಳೆಯರಿಗೆ ಅನಗತ್ಯ ಕಿರಿಕಿರಿಯಾಗದಂತೆ ಬೀಡಾಡಿ ಶ್ವಾನಗಳನ್ನು ಉತ್ತಮವಾಗಿ ನಿರ್ವಹಿಸುವಂತಾಗಬೇಕಿದೆ ಅಷ್ಟೆ.

- ಕೆ.ಎಸ್. ಮೂರ್ತಿ