ಪೊನ್ನಂಪೇಟೆ, ಅ. ೨೯: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ತಾ. ೩೦ ಹಾಗೂ ೩೧ ರಂದು ನಡೆಯಲಿರುವ ಕಾವೇರಿಯನ್ಸ್ ಫೆಸ್ಟ್ ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮದ ಬ್ಯಾನರ್ ಹಾಗೂ ಪೋಸ್ಟರ್ಗಳನ್ನು ಸಮಾಜ ಸೇವಕಿ ಹಾಗೂ ದಾನಿ ಕೈಬುಲಿರ ಪಾರ್ವತಿ ಬೋಪಯ್ಯ ಅವರು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ಯುವ ಸಮುದಾಯ ಸಾಮಾಜಿಕ, ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢವಾಗಿ ಬೆಳೆಯಬೇಕು. ವಿವಿಧೆಡೆಯಿಂದ ಬಂದಿರುವ ವಿದ್ಯಾರ್ಥಿಗಳು ಒಂದೆಡೆ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿ ಸ್ನೇಹಪರತೆಯಿಂದ ಬೆರೆಯಬೇಕು. ಕೇಳಿ ಕಲಿ ನೋಡಿ ಕಲಿ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಂದೆ ತಾಯಿಗೆ, ಓದಿದ ಶಾಲೆಗೆ, ಗುರುಗಳಿಗೆ ಗೌರವ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಮಾತನಾಡಿ, ಕೊಡಗು ಜಿಲ್ಲೆ ಸೇರಿದಂತೆ ಹುಣಸೂರು, ಪಿರಿಯಾಪಟ್ಟಣ ವ್ಯಾಪ್ತಿಯ ಎಲ್ಲಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಾವೇರಿಯನ್ಸ್ ಫೆಸ್ಟ್ ಹಾಗೂ ಫುಡ್ ಫೆಸ್ಟ್ ಎಂಬ ಹೆಸರಿನಲ್ಲಿ ಎರಡು ದಿನಗಳ ಕಾಲ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ ಸುಮಾರು ೨೯ ಕಾಲೇಜುಗಳು ನೋಂದಾಯಿಸಿಕೊAಡಿದ್ದು, ಬೇರೆ ಬೇರೆ ವಿಭಾಗಳಲ್ಲಿ ೧,೩೦೦ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಸ್ಪರ್ಧಾಕಾಂಕ್ಷಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕೆಂಬ ಉದ್ದೇಶ ಹೊಂದಲಾಗಿದೆ. ದಾನಿಗಳ ಪ್ರೋತ್ಸಾಹದಿಂದ ಕಾವೇರಿಯನ್ಸ್ ಫೆಸ್ಟ್ ಅನ್ನು ಆಯೋಜಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕುಪ್ಪಂಡ ಬೆಳ್ಳಿಯಪ್ಪ ಅವರು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರ ಸೂಸಲು ಇದೊಂದು ಅವಕಾಶವಾಗಿದ್ದು ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಇದೇ ಸಂದರ್ಭ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಾಜ ಸೇವಕಿ ಹಾಗೂ ದಾನಿ ಕೈಬುಲಿರ ಪಾರ್ವತಿ ಬೋಪಯ್ಯ ಅವರನ್ನು ಕಾವೇರಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಉಪ ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ, ಐ.ಕ್ಯೂ.ಎ.ಸಿ ಸಂಚಾಲಕಿ ಡಾ. ನಯನಾ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಡಾ. ಪಿ.ಪಿ. ಸವಿತಾ, ಹಿರಿಯ ಉಪನ್ಯಾಸಕರಾದ ಸಿ.ಪಿ. ಸುಜಯ, ಕೆ.ಕೆ. ಚಿತ್ರಾವತಿ, ಕಚೇರಿ ಅಧೀಕ್ಷಕಿ ಟಿ.ಕೆ. ಲತಾ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ಫ್ಲ್ಯಾಸ್ ಮೋಬ್ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸಿತು.