ಐಗೂರು, ಅ. ೨೯: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಭಾಷೆ ಗೌಡ ಸಮಾಜದ ವತಿಯಿಂದ ಯಡವಾರೆ ಅರೆಭಾಷೆ ಗೌಡ ಸಮಾಜದ ಸಮುದಾಯ ಭವನದಲ್ಲಿ ೮ನೇ ವರ್ಷದ ಕೈಲ್ ಮುಹೂರ್ತ ಸಂತೋಷಕೂಟ ಸಂಭ್ರಮದಿAದ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಂಸ್ಕೃತಿಯನ್ನು ಮರೆಯುತ್ತಿರುವುದು ಕಂಡುಬರುತ್ತಿದೆ. ಸಮಾಜದ ಕಲೆ, ಸಂಸ್ಕೃತಿ, ಉಳಿಸಿ - ಬೆಳೆಸಲು ಇಂತಹ ಸಾಮೂಹಿಕ ಆಚರಣೆಗಳು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಮಾಜಗಳು ಸಂಸ್ಕೃತಿಯ ಉಳಿವಿಗೆ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಅಭಿಪ್ರಾಯಿಸಿದರು.
ಮಕ್ಕಳಿಗೆ ಸಂಸ್ಕೃತಿಯ ಅರಿವನ್ನು ಮೂಡಿಸುವ ಕೆಲಸವನ್ನು ಪೋಷಕರು ಮಾಡದಿದ್ದಲ್ಲಿ, ಹಿರಿಯರು ಕಾಪಾಡಿಕೊಂಡು ಬಂದ ಸಂಸ್ಕೃತಿಯನ್ನು ಮುಂದಿನ ತಲೆಮಾರು ಕಳೆದುಕೊಳ್ಳಲಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಾಗಿ ಆಚರಿಸುವುದರೊಂದಿಗೆ, ಕುಟುಂಬದ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಗೂರು ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ಬಾರನ ಬಿ. ಭರತ್‌ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಪೊನ್ನಚನ ಕೆ. ಗಣಪತಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಕಾಫಿ ಬೆಳೆಗಾರರಾದ ಕಾಸ್ಪಾಡಿ ಬಿ. ತಮ್ಮುಯ್ಯ, ಪಾಣತ್ತಲೆ ಜಿ. ಜನಾರ್ಧನ ಇದ್ದರು.
ಕಾರ್ಯಕ್ರಮದ ಪ್ರಯುಕ್ತ ಸಮಾಜ ಬಾಂಧವರಿಗೆ ನಡೆದ ವಿವಿಧ ಕ್ರೀಡಾ ಸ್ಪರ್ಧೆಯನ್ನು ಯಡವಾರೆ ಕಾಫಿ ಬೆಳೆಗಾರರಾದ ಕಾಸ್ಪಾಡಿ. ಬಿ. ತಮ್ಮಯ್ಯ ಉದ್ಘಾಟಿಸಿದರು. ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಾಳೇರಮ್ಮನ ಸಾವಿತ್ರಿ ಪಾಲಾಕ್ಷ ಪ್ರೋತ್ಸಾಹ ಧನ ವಿತರಿಸಿದರು. ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಚೆರಿಯಮನೆ ರಾಮಪ್ಪ ಪ್ರೋತ್ಸಾಹ ಧನ ನೀಡಿದರು. ಚಿಕ್ಕ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆ, ಸಮಾಜ ಬಾಂಧವರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಲಿಂಬೆಹಣ್ಣನ್ನು ಚಮಚದಲ್ಲಿರಿಸಿ ಬಾಯಿಯಲ್ಲಿಟ್ಟು ಓಡುವ ಸ್ಪರ್ಧೆ, ಬಾಂಬ್ ಇನ್ ದ ಸಿಟಿ, ಪಾಸಿಂಗ್ ದ ಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.