ಸಿದ್ದಾಪುರ, ಅ. ೨೫ : ಸರ್ಕಾರಿ ಜಾಗದಿಂದ ಅಕ್ರಮವಾಗಿ ಸಿಲ್ವರ್ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಗ್ರಾಮಸ್ಥರು ತಡೆದು ಪೊಲೀಸರಿಗೆ ದೂರು ನೀಡಿದ ಘಟನೆ ಅರೆಕಾಡು ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡು ಗ್ರಾಮದಲ್ಲಿ ಇರುವ ೩ ಎಕರೆ ಸರಕಾರಿ ಜಾಗದಲ್ಲಿ ಮತ್ತು ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಸಿಲ್ವರ್ ಮರಗಳನ್ನು ಯಾವುದೇ ಅನುಮತಿ ಇಲ್ಲದೆ ಕಡಿದು ಲಾರಿಯಲ್ಲಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಗ್ರಾಮಸ್ಥರು ಲಾರಿಯನ್ನು ತಡೆದಿದ್ದಾರೆ.
ನಂತರ ಗ್ರಾಮಸ್ಥರು ಸಿದ್ದಾಪುರ ಪೊಲೀಸರಿಗೆ ಮರ ಕಡಿದ ವ್ಯಕ್ತಿಯ ಮೇಲೆ ಹಾಗೂ ಇದಕ್ಕೆ ಶಾಮೀಲಾಗಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಜಾಗದಿಂದ ಅಕ್ರಮವಾಗಿ ಕಡಿದಿರುವ ಮರಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅರೆಕಾಡು ಗ್ರಾಮಸ್ಥರು ಸರ್ಕಾರಿ ರಜೆ ಇರುವ ಸಂದರ್ಭದಲ್ಲಿ ಸರ್ಕಾರಿ ಜಾಗದಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಸಿಲ್ವರ್ ಮರಗಳನ್ನು ಕಡಿದು ಸಾಗಾಟ ಮಾಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಂಬAಧಪಟ್ಟ ಗ್ರಾಮ ಪಂಚಾಯಿತಿ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕÀ ಡಾ. ಮಂತರ್ ಗೌಡ ಅವರಿಗೂ ದೂರವಾಣಿ ಮೂಲಕ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.