ಸೋಮವಾರಪೇಟೆ, ಅ. ೨೪: ಮನುಜಮತ-ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂಬ ಪಂಚಮAತ್ರ ಭವಿಷ್ಯದ ದೃಷ್ಟಿಯಾಗಬೇಕೆಂದು ಕರೆ ನೀಡಿದ, ಜಗತ್ತಿಗೆ ವಿಶ್ವಮಾನವ ಸಂದೇಶ ರವಾನಿಸಿದ ಕರುನಾಡಿನ ಹೆಮ್ಮೆಯ ಕವಿ, ರಾಷ್ಟçಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ ಪ್ರತಿಮೆಯನ್ನು ಸೋಮವಾರಪೇಟೆಯಲ್ಲಿ ಲೋಕಾರ್ಪಣೆ ಮಾಡಲಾಯಿತು.

ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ ಹಾಗು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಆಶ್ರಯದಲ್ಲಿ, ತಾಲೂಕು ಕಸಾಪ ಭವನ ಮುಂಭಾಗ ನಿರ್ಮಾಣ ಮಾಡಿರುವ ಕುವೆಂಪು ಅವರ ಪ್ರತಿಮೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು, ಕುವೆಂಪು ಅವರು ಸತ್ಯ, ಸಮಾನತೆಯೊಂದಿಗೆ ಎಲ್ಲಾ ಸಮುದಾಯಕ್ಕೆ ಪ್ರೀತಿ ತೋರಿಸುವ ಕೆಲಸ ಮಾಡಿದ್ದರು. ಅವರ ಮಾರ್ಗದರ್ಶನದಂತೆ ಸಮಾಜ ನಡೆಯಬೇಕು ಎಂದು ಅಭಿಪ್ರಾಯಿಸಿದರು.

ಜ್ಞಾನಪೀಠ, ಪದ್ಮಭೂಷಣಕ್ಕಿಂತಲೂ ಮೇರು ವ್ಯಕ್ತಿತ್ವ ಹೊಂದಿದ್ದ ಕುವೆಂಪು ಅಂತಹವರು ಮತ್ತೆ ಹುಟ್ಟಬೇಕು ಎಂದ ಅವರು, ಪ್ರತಿಮೆ ನಿರ್ಮಾಣದಿಂದ ವಿಶ್ವಮಾನವ ತತ್ವದ ಜಾಗೃತಿ ಸಾಧ್ಯ. ಪ್ರತಿಮೆಯ ರಕ್ಷಣೆ ಎಲ್ಲರ ಜವಾಬ್ದಾರಿ. ಸತ್ಯದ ಮಾರ್ಗದಲ್ಲಿ ಸಮಾನತೆಯೊಂದಿಗೆ ಎಲ್ಲಾ ಜನಾಂಗಕ್ಕೂ ಪ್ರೀತಿ ಹಂಚಬೇಕು ಎಂದರು.

ಇದೇ ಸಂದರ್ಭ ಕಸಾಪ ಭವನದ ಮುಂದುವರೆದ ಕಾಮಗಾರಿಗೆ ಅನುದಾನ ಒದಗಿಸಬೇಕೆಂದು ಶಾಸಕರಿಗೆ ಕಸಾಪ ಪದಾಧಿಕಾರಿಗಳು ಮನವಿ ಮಾಡಿದರು. ಭವನ ನಿರ್ಮಾಣಕ್ಕೆ ರೂ. ೧೫ ಲಕ್ಷ ಅನುದಾನ ಒದಗಿಸಲಾಗುವುದು ಎಂದು ಘೋಷಿಸಿದ ಶಾಸಕರು, ಶತಮಾನೋತ್ಸವ ಭವನದ ಕಾಮಗಾರಿ ಪೂರ್ಣಗೊಳಿಸಲು ರೂ. ೨ ಕೋಟಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು. (ಮೊದಲ ಪುಟದಿಂದ) ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಕುವೆಂಪು ಅವರು ಸಾಹಿತ್ಯ ಕ್ಷೇತ್ರದ ಅನನ್ಯ ಶಕ್ತಿ. ರಾಮಾಯಣ ದರ್ಶನಂ ಮೂಲಕ ಮನುಕುಲದ ಸತ್ವವನ್ನು ಜಗತ್ತಿಗೆ ತೋರಿಸಿದರು. ಕುವೆಂಪು ಅವರು ಎಂದಿಗೂ ಯಾವ ಜಾತಿಯ ವಿರೋಧಿಯೂ ಆಗಿರಲಿಲ್ಲ. ವ್ಯಕ್ತಿಗಿಂತ ಸಮಷ್ಟಿ ಮಹತ್ವದ್ದು ಎಂಬ ಚಿಂತನೆ ಹೊಂದಿದ್ದರು ಎಂದು ಅಭಿಪ್ರಾಯಿಸಿದರು.

ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ರಾಷ್ಟçಕವಿಯ ಸ್ಮರಣೆ ನಿರಂತರವಾಗಿರಬೇಕು. ನಾವು ಕನ್ನಡಕ್ಕೆ ಆದ್ಯತೆ ನೀಡಬೇಕು. ಕುವೆಂಪು ಅವರಿಂದ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಗಿದೆ. ಕನ್ನಡ ಉಳಿಸಿ ಬೆಳೆಸುವ ಕಾಯಕ ನಿರಂತರವಾಗಿರಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷ ಜೆ.ಸಿ. ಶೇಖರ್ ೨೦೦೬ ರ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಕುವೆಂಪು ಪ್ರತಿಮೆ ನಿರ್ಮಾಣದ ಚಿಂತನೆ ನಡೆಸಲಾಗಿತ್ತು. ಸಮ್ಮೇಳನದಲ್ಲಿ ಉಳಿಕೆಯಾದ ಹಣದಿಂದ ಇದೀಗ ಪ್ರತಿಮೆ ನಿರ್ಮಾಣ ಮಾಡಲಾಗಿದೆ ಎಂದರು.

ಕುಪ್ಪಳ್ಳಿಯ ರಾಷ್ಟçಕವಿ ಕುವೆಂಪು ಪ್ರತಿಷ್ಠಾನದ ಖಜಾಂಚಿ, ಕುವೆಂಪು ಕುಟುಂಬಸ್ಥರಾದ ಮನುದೇವ್ ದೇವಾಂಗಿ ಮಾತನಾಡಿ, ಕುವೆಂಪು ಪ್ರತಿಮೆಯನ್ನು ಸೋಮವಾರಪೇಟೆಯಲ್ಲಿ ಸ್ಥಾಪಿಸಿರುವುದು ಶ್ಲಾಘನೀಯ. ಕುವೆಂಪು ಅವರು ಶಾಲಾ ಹಂತದಲ್ಲಿ ಪ್ರಥಮವಾಗಿ ಆಂಗ್ಲ ಭಾಷೆಯಲ್ಲಿ ಕವನ ಬರೆಯುತ್ತಿದ್ದರು. ಈ ಸಂದರ್ಭ ಆಂಗ್ಲ ಅಧಿಕಾರಿ ಜೇಮ್ಸ್ ಖಝಿನ್ಸ್ ಮಾತಿನಿಂದ ಸ್ವಯಂ ಜಾಗೃತಿಗೊಂಡು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆಗೆ ತೊಡಗಿದರು ಎಂದರು.

ಎಲ್ಲರೂ ಮಾತೃಭಾಷೆಗೆ ಆದ್ಯತೆ ನೀಡಬೇಕು ಎಂದ ಅವರು, ೧೯೩೨ರಲ್ಲಿ ಮಡಿಕೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭ ಕುವೆಂಪು ಅವರು ತಂದೆಗೆ ಬರೆದ ಪತ್ರದಲ್ಲಿ ‘ಕೊಡಗು ದಾರ್ಶನೀಯ ಸ್ಥಾನ, ಮಲೆನಾಡಿನ ಸೊಬಗು, ಸಹೃದಯರ ಸಂಗ ಸಿಗುತ್ತದೆ. ಸಮ್ಮೇಳನಕ್ಕೆ ಹೋಗುವ’ ಎಂದು ಉಲ್ಲೇಖಿಸಿದ್ದರು. ಕೊಡಗಿನ ಬಗ್ಗೆ ಕುವೆಂಪು ಅವರಿಗೆ ಅತೀವ ಪ್ರೀತಿಯಿತ್ತು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಪ.ಪಂ. ಅಧ್ಯಕ್ಷೆ ಜಯಂತಿ ಶಿವಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಪ್ರಥಮ ಸಾಹಿತ್ಯ ಸಮ್ಮೇಳನದ ಖಜಾಂಚಿ ಎ.ಆರ್. ಮುತ್ತಣ್ಣ, ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಕಸಾಪ ಪದಾಧಿಕಾರಿಗಳಾದ ಎ.ಪಿ. ವೀರರಾಜು, ನಂಗಾರು ಕೀರ್ತಿ ಪ್ರಸಾದ್, ಸಿ.ಎಸ್. ನಾಗರಾಜು, ಜವರಪ್ಪ, ಕೊಡ್ಲಿಪೇಟೆಯ ನಾಗರಾಜು, ನಗರ ಕರವೇ ಅಧ್ಯಕ್ಷ ಮಂಜುನಾಥ್, ವಿವಿಧ ಹೋಬಳಿ ಘಟಕದ ಅಧ್ಯಕ್ಷರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು, ಕಸಾಪ ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು.

ಕಸಾಪ ಜಿಲ್ಲಾ ಸಹ ಕಾರ್ಯದರ್ಶಿ ಜಲಜಾ ಶೇಖರ್, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜ್ಯೋತಿ ಅರುಣ್, ಕಾರ್ಯದರ್ಶಿ ಕೆ.ಪಿ. ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು.