ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಲಭಿಸುವ ಹಲವಾರು ವಸ್ತುಗಳಿಗೆ ವಿಶೇಷವಾದ ವಿನ್ಯಾಸವನ್ನು ಮಾಡಿ ಅವುಗಳ ಮೌಲ್ಯವನ್ನು ಹೆಚ್ಚಿಸುವ ಚಾತುರ್ಯಕ್ಕೆ ಕಲೆ ಎನ್ನಬಹುದು. ಇಂತಹ ಕಲೆಯನ್ನು ಕೈವಶಮಾಡಿಕೊಂಡು ಅದರ ಬಳಕೆಯಿಂದ ಮನುಕುಲದ ಬದುಕನ್ನು ಮತ್ತಷ್ಟು ಉತ್ಕೃಷ್ಟಗೊಳಿಸುವವನೇ ಕಲಾವಿದನಾಗುವನು. ಕಲಾವಿದ ವಸ್ತುಗಳನ್ನು ನೋಡುವ ದೃಷ್ಟಿಕೋನ ಇತರರಿಗಿಂದ ಭಿನ್ನವಾಗಿರುವುದಲ್ಲದೆ ಆ ನೋಟವನ್ನು ಬಳಸಿಕೊಂಡು, ದೊರೆಯುವ ವಸ್ತುವಿಗೆ ವಿಭಿನ್ನ ರೂಪವನ್ನು ಕೊಟ್ಟು ವಸ್ತುವಿನ ಬಳಕೆಯನ್ನು ಮೇಲ್ಮೆಗೊಳಸುವ ಕಲಾವಿದರನ್ನು ಸ್ಮರಿಸಿ ಅವರಿಗೆ ಗೌರವವನ್ನು ನೀಡಲು ಅಕ್ಟೋಬರ್ ೨೫ನ್ನು ಅಂತರರಾಷ್ಟಿçÃಯ ಕಲಾವಿದರ ದಿನವೆಂದು ಪರಿಗಣಿಸಲಾಗಿದೆ.

ಇತಿಹಾಸದ ಪುಟಗಳನ್ನೊಮ್ಮೆ ತಿರುವಿನೋಡಿದಾಗ ಪ್ರಸಿದ್ಧ ಕ್ಯೂಬಿಸ್ಟ್ ಚಿತ್ರಕಾರ ಪ್ಯಾಬ್ಲೋ ಪಿಕಾಸೋ ರವರು ೧೯೮೧ರ ಅಕ್ಟೋಬರ್ ೨೫ರಂದು ಜನಿಸಿರುವುದು ತಿಳಿದುಬರುತ್ತದೆ. ಇಂತಹ ಮೇರು ಕಲಾವಿದನನ್ನು ನೆನೆದು ಆ ಮೂಲಕ ಎಲ್ಲ ಕಲಾವಿದರ ಪ್ರತಿಭೆಗಳನ್ನು ಸ್ಮರಿಸುವ ಹಾಗೂ ಅವರ ಕಲಾಭಿಮಾನವನ್ನು ಇನ್ನಷ್ಟು ಪ್ರೋತ್ಸಾಹಿಸುವ ದೃಷ್ಟಿಯಿಂದ ವಿಶ್ವದಾದ್ಯಂತ ಈ ದಿವಸದಂದು ಕಲಾವಿದರ ಪ್ರತಿಭೆಯನ್ನು ಗುರುತಿಸುವ ಚಿಂತನೆ ನಡೆಸಲಾಗುತ್ತದೆ.

ಬೆಟ್ಟದ ಬುಡದಲ್ಲಿಯೋ ಹೊಲ-ಗದ್ದೆಗಳಲ್ಲಿಯೋ ಬಿದ್ದಿರುವ, ನಿರ್ಲಕ್ಷö್ಯಕ್ಕೆ ಒಳಗಾಗಿರುವ ಒಂದು ಬಂಡೆಯು ಶ್ರೀಸಾಮಾನ್ಯರ ಕೈಗೆ ಸಿಕ್ಕಿದಾಗ ಅದನ್ನು ಚೂರುಚೂರಾಗಿ ಒಡೆದು ಜಲ್ಲಿಕಲ್ಲನ್ನಾಗಿ ಮಾಡಿ ಕಟ್ಟಡಗಳಿಗೆ ಬಳಸುವರು. ಆದರೆ ಅದು ಒಬ್ಬ ಸಾಮಾನ್ಯ ಕಲಾವಿದನಿಗೆ ಸಿಕ್ಕಿದಾಗ ಅದನ್ನು ದೇವಸ್ಥಾನಕ್ಕೆ ಹೋಗುವ ಮೆಟ್ಟಿಲನ್ನಾಗಿ ಮಾಡಬಹುದು. ಅದೇ ಕಲ್ಲು ಒಬ್ಬ ಪ್ರತಿಭಾವಂತ ಕಲಾವಿದನ ಕೈಯಲ್ಲಿ ದೇವರ ಮೂರ್ತಿಯಾಗಿ ಅರಳಲೂಬಹುದು. ಈ ಹಿಂದೆ ಮಂಡ್ಯದ ನೆಲದಲ್ಲಿ ಶಿಲೆಯಾಗಿ ಬಿದ್ದಿದ್ದ ಕಲ್ಲೊಂದು ಈಗ ಅಯೋಧ್ಯೆಯ ದೇಗುಲದಲ್ಲಿ ಶ್ರೀರಾಮನಾಗಿ ಪೂಜೆಗೆ ಒಳಗಾಗುತ್ತಿದೆ. ಇದು ಶಿಲ್ಪಶಾಸ್ತçವನ್ನು ಮತ್ತು ಶಿಲಾಶಾಸ್ತçವನ್ನು ಕರಗತವನ್ನಾಗಿಸಿಕೊಂಡ ಕಲಾವಿದನ ಕೌಶಲವೆನ್ನಬಹುದು. ಅಂತೆಯೇ ಆಗಸದಲ್ಲಿ ಮೂಡುವ ಕಾಮನಬಿಲ್ಲು ಕೆಲವು ಕ್ಷಣಗಳಷ್ಟು ಮಾತ್ರ ನಮಗೆ ಆನಂದ ನೀಡಿದರೂ ಅದನ್ನು ಚಿತ್ರಕಲಾವಿದನೊಬ್ಬ ಸೆರೆಹಿಡಿದು ಕಾಗದದಲ್ಲಿ ರೂಪಿಸಿದಾಗ ಆ ಸೌಂದರ್ಯ ಕೊನೆಯವರೆಗೂ ಉಳಿದುಬಿಡುತ್ತದೆ.

ನೈಸರ್ಗಿಕವಾಗಿ ಬೆಳೆದ ಬಿದಿರೊಂದು ಕಲಾವಿದನ ಕೈಯಲ್ಲಿ ಕೊಳಲಾಗಿ ನೂರಾರು ಶಾಸ್ತಿçÃಯ ರಾಗಗಳನ್ನು ಹೊರಡಿಸಬಹುದು. ಸಾಮಾನ್ಯರು ತೆಂಗಿನ ತಿರುಳನ್ನು ಅಡುಗೆಗಾಗಿ ಬಳಸಿ ಅನಂತರ ಅದರ ಕರಟವನ್ನು ಬಚ್ಚಲ ಒಲೆಗೆ ತಳ್ಳಿಬಿಟ್ಟರೂ ಒಬ್ಬ ಕಲಾವಿದನ ಕೈಗೆ ಅದು ದೊರೆತಾಗ ಅದರ ಮೇಲೆ ಚರ್ಮವನ್ನು ಹರಡಿ, ಅದಕ್ಕೊಂದು ಸಣ್ಣ ಕೋಲನ್ನು ಸಿಕ್ಕಿಸಿ ಆ ಕೋಲಿನ ಮೇಲೆ ತಂತಿಗಳನ್ನು ಬಿಗಿದು ಅದನ್ನೊಂದು ಕರಟವಾದ್ಯವನ್ನಾಗಿ ಮಾಡಿ ಕೇಳುಗರ ಮನವನ್ನು ಸೆಳೆಯುವ ಚಿತ್ರಣವು ಬಹುತೇಕರು ಜಾತ್ರೆಗಳಲ್ಲಿಯೋ ಸಂತೆಗಳಲ್ಲಿಯೋ ನಾವು ನೋಡಿರಬಹುದು.

ಕಾಡಿನಲ್ಲಿ ಯಥೇಚ್ಛವಾಗಿ ಬೆಳೆಯುವ ಬಿದಿರನ್ನು ಕಡಿದುತಂದು ಅದನ್ನು ಸಿಗಿದು ಅನಂತರ ಈ ಸಿಗಿದ ತುಂಡುಗಳನ್ನು ಕಲಾತ್ಮಕವಾಗಿ ಜೋಡಿಸಿ ಬುಟ್ಟಿಗಳನ್ನಾಗಿ ಮಾಡುವ ಕಲಾವಿದರನ್ನು ನಾವು ಕೊಡಗಿನಲ್ಲಿ ಸಂತೆಗಳ ದಿನದಂದು ನೋಡಿರಬಹುದು. ಬಣ್ಣದ ಪುಡಿಗಳನ್ನು ತಂದು ಅದನ್ನು ದೇವಾಲಯಗಳ ಮುಂದೆ ಅಥವಾ ಕೆಲವು ಧಾರ್ಮಿಕ ಹಬ್ಬಗಳಲ್ಲಿ ಮನೆಯ ಮುಂದೆ ರಂಗೋಲಿಯಾಗಿ ಹರಡಿ ಮನೆಯ ಸೊಬಗನ್ನು ಹೆಚ್ಚಿಸುವ ಕಲೆಯನ್ನೂ ಕೆಲವು ಹೆಣ್ಣುಮಕ್ಕಳಲ್ಲಿ ನಾವು ಕಂಡುಕೊAಡಿರಬಹುದು. ಕೊಡಗಿನಲ್ಲಿಯೂ ಚಿತ್ರಕಲಾವಿದರು, ಕೊಳಲುವಾದಕರು, ನೃತ್ಯ ಪ್ರವೀಣರು, ನಟರು, ಹಾಡುಗಾರರು ಮೊದಲಾದ ಕಲಾವಿದರು ತಮ್ಮೊಳಗೆ ಇರುವ ಪ್ರತಿಭೆಯನ್ನು ಅನಾವರಣ ಮಾಡುತ್ತಿದ್ದಾರೆ.

ಈ ದಿವಸದಂದು ಸ್ಥಳೀಯ ಕಲಾವಿದರನ್ನು ಗುರುತಿಸಿ ಅವರ ಕೆಲಸ ಮತ್ತು ಕ್ರಿಯಾತ್ಮಕತೆಯನ್ನು ಮಾನ್ಯ ಮಾಡಬಹುದು. ಸಾರ್ವಜನಿಕರಲ್ಲಿ ಕಲೆಯ ಬಗ್ಗೆ ಅಭಿಮಾನವನ್ನು ಮತ್ತು ಅದರ ಮಹತ್ವವನ್ನು ಮೂಡಿಸಬಹುದು. ಮುಂದಿನ ಪೀಳಿಗೆಗೆ ಇಂತಹ ಕಲೆಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸಬಹುದು. ಕಲಾವಿದರ ಕಲೆಯ ಪ್ರದರ್ಶನವನ್ನು ಏರ್ಪಡಿಸಬಹುದು. ಪ್ರಸಿದ್ಧ ನೃತ್ಯಗಾರರನ್ನು ಮತ್ತು ಸಂಗೀತ ಕಲಾವಿದರನ್ನು ಗುರುತಿಸಿ ಅವರ ನೃತ್ಯವನ್ನು ಜನರ ಮುಂದೆ ಇರಿಸಿ, ಸಂಗೀತವನ್ನು ಕೇಳಿಸಿ ಈ ದಿನವನ್ನು ಬಳಸಿಕೊಳ್ಳಬಹುದು. ಶಾಲಾ-ಕಾಲೇಜುಗಳಲ್ಲಿಯೂ ಬದುಕನ್ನು ಹೆಚ್ಚು ಆನಂದದಾಯಕವಾಗಿಸುವ ಈ ಕಲೆಗಳ ಬಗ್ಗೆ ಚರ್ಚಾಕೂಟವನ್ನು ಏರ್ಪಡಿಸಬಹುದು. ಜಾನಪದ ಕಲಾವಿದರನ್ನು ಕರೆಸಿ ಅವರ ಕಲೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಹುದಲ್ಲದೆ ಮುಂಬರುವ ತಲೆಮಾರುಗಳಿಗೆ ಈ ಕಲೆಗಳ ಬಗ್ಗೆ ಪ್ರೇರಣೆಯನ್ನೂ ನೀಡಬಹುದು.

ಆಧುನಿಕ ತಂತ್ರಜ್ಞಾನಕ್ಕೆ ಸಿಲುಕಿ ಎಲ್ಲವನ್ನೂ ಯಂತ್ರಗಳಿAದಲೇ ಕಂಡುಕೊಳ್ಳುವ ಈಗಿನ ದಿನಗಳಲ್ಲಿ ಕಲಾವಿದರಿಗೆ ಸಿಗಲೇಬೇಕಾದ ಗೌರವ ಪ್ರೋತ್ಸಾಹಗಳು ಕುಸಿಯುತ್ತಿರುವುದು ಬಹಳ ಖೇದಕರವಾಗಿದೆ. ನಮಗಿಷ್ಟಪಟ್ಟ ಚಿತ್ರವನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಕೆಲವು ಕ್ಷಣಗಳಲ್ಲಿಯೇ ನಾವು ರಚಿಸಿಕೊಳ್ಳಬಹುದು. ನಮ್ಮ ಮೆಚ್ಚಿನ ಸಂಗೀತವನ್ನೂ ಇದರ ಮೂಲಕವೇ ನಾವು ಸೃಷ್ಟಿಸಬಹುದು. ಆದರೆ, ದೈಹಿಕವಾಗಿ ಹೊರತರುವ ಕಲಾಗಾರಿಕೆಯಿಂದ ದೊರೆಯುವ ತೃಪ್ತಿಯು, ತುಷ್ಟಿಯು ಕೃತÀಕಬುದ್ಧಿಮತ್ತೆಯ ಮೂಲಕ ಹೊರಹೊಮ್ಮುವ ಕಲೆಯಿಂದ ಎಂದಿಗೂ ನಮಗೆ ದೊರೆಯಲಾರದು ಎನ್ನುವುದು ಕಟುಸತ್ಯವೂ ಆಗಿದೆ.

ಒಟ್ಟಿನಲ್ಲಿ ಕಲಾವಿದರ ಕಲೆಯನ್ನು ಪ್ರೋತ್ಸಾಹಿಸಿ ಅವರ ಬದುಕನ್ನೂ ಗಟ್ಟಿಗೊಳಿಸುವ ಕೆಲಸವನ್ನು ನಾವು ಮಾಡಿದಾಗ ಮಾತ್ರ ಈ ದಿನಕ್ಕೆ ಮಹತ್ವ ಬರಬಹುದು.

- ಕಿಗ್ಗಾಲು ಎಸ್. ಗಿರೀಶ್., ಮೂರ್ನಾಡು. ಮೊ. ೯೧೪೧೩ ೯೫೪೨೬