ಕಣಿವೆ, ಅ. ೨೩: ಸತತ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಳೆಗೆ ತಗ್ಗುಪ್ರದೇಶ ಜಲಾವೃತಗೊಂಡಿತು.

ಶನಿವಾರಕ್ಕೆ ಮುಕ್ತಾಯವಾಗುವ ಹಸ್ತ ಮಳೆ ತನ್ನ ಕೊನೆಯ ಪಾದದಲ್ಲಿ ಭಯಾನಕವಾಗಿ ಸುರಿಯುವ ಮೂಲಕ ನಿವಾಸಿಗಳಲ್ಲಿ ಆತಂಕ ಉಂಟುಮಾಡಿತು.

ಸಾವಿರಾರು ರೂಗಳನ್ನು ತೆತ್ತು ಪಟಾಕಿಗಳನ್ನು ತಂದಿಟ್ಟು ಸಂಜೆಯಾಗುವುದನ್ನು ಎದುರು ನೋಡುತ್ತಿದ್ದ ಮಕ್ಕಳಿಗೆ ಹಾಗೂ ಯುವಕರಿಗೆ ಸುರಿದ ಮಳೆ ನೋಡನೋಡುತ್ತಲೇ ತಲ್ಲಣ ಉಂಟುಮಾಡಿತು. ಬುಧವಾರ ಸಂಜೆ ೫:೩೦ ರಿಂದ ರಾತ್ರಿ ೯:೩೦ ರವರೆಗೂ ನಿರಂತರವಾಗಿ ಸುರಿದ ಮಳೆ ನಿವಾಸಿಗಳಲ್ಲಿ ಬೆಳಿಗ್ಗೆಯಿಂದಲೂ ಮನೆ ಮಾಡಿದ್ದ ಹಬ್ಬದ ರಂಗನ್ನು ಕ್ಷಣಾರ್ಧದಲ್ಲಿ ಕಸಿಯಿತು, ತಗ್ಗು ಪ್ರದೇಶಗಳಿಗೆ ಮಳೆಯ ನೀರು ನುಗ್ಗಿ ಸಾಕಷ್ಟು ಹಾನಿ ಉಂಟು ಮಾಡಿತು.

ಕುಶಾಲನಗರದ ಸೋಮೇಶ್ವರ ದೇವಾಲಯದ ಬಳಿಯ ಹಲ್ಲರ್ ಮಿಲ್ ಒಂದಕ್ಕೆ ಮೇಲ್ಭಾಗದಿಂದ ಹರಿದು ಬಂದ ನೀರು ರಸ್ತೆಯ ಮಧ್ಯೆ ಹರಿದು ಹಲ್ಲರ್ ಮಿಲ್ ಒಳಗೆ ಹರಿದು ಅವಾಂತರ ಸೃಷ್ಟಿಸಿತು.

ಇನ್ನು ಚರಂಡಿಗಳಲ್ಲಿ ತ್ಯಾಜ್ಯ ತುಂಬಿದ ಕಾರಣ ಮಳೆಯ ನೀರು ಚರಂಡಿಗಳಲ್ಲಿ ಹರಿಯಲಾರದೆ ಚರಂಡಿ ಮೇಲಿಂದ ಹರಿದು ನಿವಾಸಿಗಳ ಮನೆಯೊಳಕ್ಕೆ ನುಗ್ಗಿತು.

ಸೋಮೇಶ್ವರ ದೇವಾಲಯ ಬಳಿಯ ನಿವೃತ್ತ ಕಂದಾಯ ಅಧಿಕಾರಿ ಎಂ.ಬಿ. ಬಸವರಾಜು ಎಂಬವರ ಮನೆಯ ಒಳಗಡೆ ಹರಿದು ರಾಡಿ ಎಬ್ಬಿಸಿತ್ತು. ಪಟ್ಟಣದ ಕೆಲವೆಡೆಗಳಲ್ಲಿ ಚರಂಡಿಗಳ ತ್ಯಾಜ್ಯವನ್ನು ರಸ್ತೆಗೆ ತಂದು ಬಿಸಾಕಿದ್ದರೆ, ರಸ್ತೆಯಂಚಿನಲ್ಲಿ ಕಿತ್ತು ನಿಂತಿದ್ದ ಕಲ್ಲು ರಾಶಿ ಹೆದ್ದಾರಿಯ ನಡುವೆ ಚೆಲ್ಲಾಪಿಲ್ಲಿಯಾಗಿ ಹರಡಿ ಸಂಚಾರಕ್ಕೆ ತೊಡಕು ಉಂಟುಮಾಡಿತು. ಮತ್ತೆ ಕೆಲವು ಕಡೆಗಳಲ್ಲಿ ಪೌರ ಕಾರ್ಮಿಕರಿಗೆ ಕೆಲಸ ಕೊಡದಂತೆ ತುಂಬಿ ಹರಿದ ಮಳೆಯ ನೀರು ಹಲವೆಡೆಗಳಲ್ಲಿ ಚರಂಡಿ ರಸ್ತೆಗಳನ್ನು ಸ್ವಚ್ಚ ಮಾಡಿತು. .

ದೀಪಾವಳಿ ಹಬ್ಬದ ದಿನ ಸಂಜೆ ನಿರಂತರವಾಗಿ ನಾಲ್ಕುವರೆ ತಾಸು ಸುರಿದ ಮಳೆ ಮುಂಗಾರಿನ ಸೋನೆ ಮಳೆಯನ್ನು ಮೀರಿಸಿತ್ತು. ತಿಂಗಳ ಕಾಲ ಸುರಿವ ಮುಂಗಾರು ಮಳೆಗಳಲ್ಲಿ ಹರಿದು ಬರುವ ಮಳೆಯ ನೀರಿನ ನಾಲ್ಕು ಪಟ್ಟು ನೀರು ದೀಪಾವಳಿ ಆಚರಣೆಯ ಸಂಜೆಯಿAದ ರಾತ್ರಿವರೆಗೆ ಸುರಿಯಿತು. ಚರಂಡಿಗಳು ತುಂಬಿ ರಸ್ತೆಗಳೇ ಕಾಣದಷ್ಟರ ಮಟ್ಟಿಗೆ ಮಳೆಯ ನೀರು ಹರಿದು ನಿವಾಸಿಗಳ ಹಬ್ಬದ ಮೂಡನ್ನು ಕಸಿಯಿತು.