ಗೋಣಿಕೊಪ್ಪಲು, ಅ. ೨೧: ಪೊನ್ನಂಪೇಟೆ ತಾಲೂಕು ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮದ ರೈತರಾದ ಅಳಮೇಂಗಡ ಬೋಸ್ ಮಂದಣ್ಣ ಅವರ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಹಸುವನ್ನು ಕೊಂದುಹಾಕಿದೆ. ಮುಂಜಾನೆ ವೇಳೆ ಹಸುವನ್ನು ಹುಡುಕುವ ಸಂದರ್ಭ ಹುಲಿಯ ಬಾಯಿಗೆ ಹಸು ಆಹಾರವಾಗಿರುವುದು ಕಂಡು ಬಂದಿದೆ. ಸುದ್ದಿ ತಿಳಿದ ಹಸುವಿನ ಮಾಲೀಕರು ಕಲ್ಲಳ್ಳ ವ್ಯಾಪ್ತಿಯ ಅರಣ್ಯ ಇಲಾಖಾಧಿಕಾರಿಗಳಿಗೆ ದೂರವಾಣಿ ಮೂಲಕ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಈ ಭಾಗದಲ್ಲಿ ಆಗಿಂದ್ದಾಗ್ಗೆ ನಾಗರಿಕರಿಗೆ ಹುಲಿಯ ದರ್ಶನವಾಗುತ್ತಿದೆ. ರಾತ್ರಿಯ ವೇಳೆ ರೈತರ ಕೊಟ್ಟಿಗೆಗಳಿಗೆ ದಾಳಿ ಮಾಡುವ ಹುಲಿಗಳು ಜಾನುವಾರುಗಳನ್ನು ಕೊಂದು ತೆರಳುತ್ತಿವೆ. ಇದರಿಂದಾಗಿ ರೈತರು, ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಹುಲಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.