*ಗೋಣಿಕೊಪ್ಪ, ಅ. ೨೧ : ಸಮೀಕ್ಷೆ ವಿಸ್ತರಣೆಯ ನೆಪದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಒತ್ತಡ ಹೇರುತ್ತಿರುವುದನ್ನು ಜಿಲ್ಲಾ ಅಂಗನವಾಡಿ ಕಾರ್ಯಕರ್ತರ ಸಂಘಟನೆ ಖಂಡಿಸುವುದಾಗಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತರ ಅಧ್ಯಕ್ಷೆ ಸುಮಿತ್ರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರತಿ ಬಾರಿಯೂ ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಒಂದಲ್ಲ ಒಂದು ಯೋಜನೆಗಳ ಬಗ್ಗೆ ಜನರಿಗೆ ತಲುಪಿಸುವ ಮತ್ತು ಸರ್ವೆ ಕಾರ್ಯ ಮಾಡುವ ವ್ಯವಸ್ಥೆಯನ್ನು ಪೂರಕವಾಗಿ ನಡೆಸುತ್ತಾರೆ. ತಮ್ಮ ಹಲವಾರು ಜವಾಬ್ದಾರಿ ಕರ್ತವ್ಯಗಳ ನಡುವೆ ಇತರ ವ್ಯವಸ್ಥೆಗಳ ಬಗ್ಗೆಯು ಗಮನಹರಿಸಲಾಗುತ್ತಿದೆ ಆದರೂ, ಕಾರ್ಯಕರ್ತರ ಸಂಕಷ್ಟ ಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ವಿಸ್ತರಣೆಗೊಂಡ ಸಮೀಕ್ಷೆಗೆ ಸರ್ಕಾರದ ಆದೇಶವಿಲ್ಲದಿದ್ದರೂ, ಅಂಗನವಾಡಿ ಕಾರ್ಯಕರ್ತರನ್ನು ಒತ್ತಾಯಪೂರಕವಾಗಿ ಸಮೀಕ್ಷೆ ನಡೆಸಲು ಹೇಳುತ್ತಿರುವುದು ಖಂಡನೀಯ ಎಂದರು. ಶಿಕ್ಷಕರನ್ನು ಸಮೀಕ್ಷೆ ಕಾರ್ಯದಿಂದ ಬಿಡುಗಡೆಗೊಳಿಸಿ ಇತರ ಸಿಬ್ಬಂದಿಗಳಿAದ ಸಮೀಕ್ಷೆ ಪೂರ್ಣಗೊಳಿಸುವ ಆದೇಶವನ್ನು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಆದರೆ ಎಲ್ಲಿಯೂ ಮುಖ್ಯಮಂತ್ರಿಗಳು ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಳ್ಳುವಂತೆ ಆದೇಶ ನೀಡಿರುವುದಿಲ್ಲ. ಆದರೂ, ಮೇಲಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಕಾರ್ಯಕರ್ತರನ್ನು ಸಮೀಕ್ಷೆಗೆ ಬಳಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಈ ನಡೆಯಿಂದ ಮಾನಸಿಕವಾಗಿ ಕಾರ್ಯಕರ್ತರು ಕುಗ್ಗಿ ಹೋಗುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಯಾವುದೇ ಗೌರವ ಸಂಭಾವನೆ ಇಲ್ಲದೆ ರಜಾ ದಿನಗಳಲ್ಲಿಯೂ ಕೆಲಸ ಮಾಡಿ ಎಂದರೆ ಅದನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ದೊಡ್ಡ ಮೊತ್ತದ ವೇತನ ಪಡೆದುಕೊಳ್ಳುವ ಶಿಕ್ಷಕರು ಸಮೀಕ್ಷೆಗೆ ಒಂದು ಮನೆಗೆ ನೂರು ರೂಪಾಯಿಯಂತೆ ಮತ್ತು ಗೌರವಧನವಾಗಿ ಐದು ಸಾವಿರ ರೂಪಾಯಿ ಪಡೆದುಕೊಂಡಿದ್ದಾರೆ. ಆದರೆ, ಅಂಗನವಾಡಿ ಶಿಕ್ಷಕರಿಗೆ ಗೌರವಧನವನ್ನು ನೀಡದೆ ಉಚಿತವಾಗಿ ದುಡಿಸಿಕೊಳ್ಳುವ ಅಧಿಕಾರಿಗಳ ಕ್ರಮ ಖಂಡನಾರ್ಹ ಎಂದರು. ಆರು ವರ್ಷದ ಒಳಗಿನ ಮಕ್ಕಳ ಮಾಹಿತಿ ನೀಡಬೇಕೆಂದು ತಿಳಿಸಲಾಗಿದೆ. ಅವುಗಳ ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಿಕೊಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇವೆ. ಆದರೆ ಶಿಕ್ಷಕರು ಉಳಿಸಿದ ಸಮೀಕ್ಷೆಯನ್ನು ಪೂರ್ಣಗೊಳಿಸಲು ಕಷ್ಟವಾಗಲಿದೆ ಎಂದು ಹೇಳಿದರು.

ಈ ವಿಚಾರವಾಗಿ ಅಧಿಕಾರಿಗಳು ವಿನಾಕಾರಣ ನಮಗೆ ತೊಂದರೆ ನೀಡುತ್ತಿದ್ದಾರೆ. ಹೀಗೆ ಮುಂದುವರೆದರೆ ನಾವು ಪ್ರತಿಭಟನೆಯ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಒಂದು ಪಕ್ಷ ಸಮೀಕ್ಷೆ ನಡೆಸಲು ಸರ್ಕಾರ ನಮಗೆ ಗೌರವ ಸಂಭಾವನೆ ಮತ್ತು ಮನೆಗೆ ಇಂತಿಷ್ಟು ಎಂದು ಹಣ ನಿಗದಿಪಡಿಸಿದರೆ ಸಮೀಕ್ಷೆಗೆ ಸಹಕಾರ ನೀಡುವ ಆಲೋಚನೆ ಮಾಡುತ್ತೇವೆ ಎಂದು ಹೇಳಿದರು.

ಉಚಿತವಾಗಿ ದುಡಿಸಿಕೊಳ್ಳುವ ಯೋಚನೆ ಅಧಿಕಾರಿಗಳು ಮುಂದುವರಿಸಿದರೆ ನಾವು ಪ್ರತಿಭಟಿಸುವ ಮೂಲಕ ಈ ವಿಚಾರದ ಮುಂದುವರಿಕೆಯನ್ನು ಖಂಡಿಸುತ್ತೇವೆ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ನಳಿನಾಕ್ಷಿ, ಕೋಶಾಧಿಕಾರಿ ರಾಜೇಶ್ವರಿ ಇದ್ದರು.