ಸೋಮವಾರಪೇಟೆ, ಅ. ೨೧: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರತ್ತ ಶೂ ಎಸೆದ ಪ್ರಕರಣವನ್ನು ಖಂಡಿಸಿ ಹಿರಿಕರ ಗ್ರಾಮದಲ್ಲಿ ಪ್ರತಿಭಟನೆ ನಡೆಯಿತು.
ಗ್ರಾಮದ ಶ್ರೀರಾಮೇಶ್ವರ ಯುವಕ ಸಂಘದ ಪದಾಧಿಕಾರಿಗಳು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಶೂ ಎಸೆದ ಆರೋಪಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಖ್ಯ ನ್ಯಾಯಮೂರ್ತಿಗಳಿಗೆ ಶೂ ಎಸೆಯುವ ಪ್ರಯತ್ನ ಅತ್ಯಂತ ಖಂಡನೀಯ. ಸಂವಿಧಾನ ವಿರೋಧಿಗಳಿಂದ ಮಾತ್ರ ಇಂತಹ ಕೃತ್ಯಗಳನ್ನು ಮಾಡಲು ಸಾಧ್ಯ ಎಂದು ಯುವಕ ಸಂಘದ ಅಧ್ಯಕ್ಷ ಎಚ್.ಆರ್.ಮೋಹನ್‌ದಾಸ್ ಆರೋಪಿಸಿದರು. ದಲಿತಪರ ಹೋರಾಟಗಾರ ಎಚ್.ಜೆ.ಹನುಮಯ್ಯ ಮಾತನಾಡಿ, ದೇಶದೆಲ್ಲೆಡೆ ದಲಿತ ದೌರ್ಜನ್ಯ ಮಿತಿಮೀರಿದೆ. ದಲಿತ ಜನಾಂಗಕ್ಕೆ ಸೇರಿದ ಅಧಿಕಾರಿಗಳಿಗೆ ಹಿಂಸೆ ನೀಡಲಾಗುತ್ತಿದೆ. ಒಗ್ಗಟ್ಟಿನ ಹೋರಾಟದ ಮೂಲಕ ಸಂವಿಧಾನ ವಿರೋಧಿಗಳಿಗೆ ತಕ್ಕಪಾಠ ಕಲಿಸಬೇಕು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಅಭಿಷೇಕ್, ಗ್ರಾಮ ಪಂಚಾಯಿತಿ ಸದಸ್ಯ ಸಿ.ಈ.ವೆಂಕಟೇಶ್, ಗ್ರಾಮದ ಹಿರಿಯರಾದ ರಾಜಪ್ಪ, ಉಮೇಶ್, ಬೋಜಪ್ಪ, ದೊಡ್ಡಯ್ಯ, ಪ್ರತಾಪ್, ಈರಪ್ಪ, ಶಿವಣ್ಣ, ವಸಂತ್ ಮತ್ತಿತರರು ಇದ್ದರು.