ಪೊನ್ನಂಪೇಟೆ, ಅ. ೨೧ : ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೊಂದು ಉತ್ತಮ ವೇದಿಕೆಯನ್ನು ಒದಗಿಸಿ ಕೊಡುವ ಉದ್ದೇಶದಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ತಾ. ೩೦ ಹಾಗೂ ೩೧ ರಂದು ಕಾವೇರಿಯನ್ಸ್ ಫೆಸ್ಟ್ -೨೦೨೫ ನ್ನು ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪಲು ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ಶಿಕ್ಷಣ ಪ್ರೇಮಿಗಳ ಪ್ರಯತ್ನದ ಫಲವಾಗಿ ಜನ್ಮ ತಳೆದ ಕಾವೇರಿ ಎಜುಕೇಷನ್ ಸೊಸೈಟಿ ಅಧೀನದಲ್ಲಿರುವ ಕಾವೇರಿ ಕಾಲೇಜು ಕಳೆದ ೫೭ ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ.

ಇದರೊಂದಿಗೆ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ಉದ್ದೇಶದಿಂದ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮ ಆಯೋಜಿಸಲು ಹಲವು ದಾನಿಗಳು ಕೈಜೋಡಿಸಿದ್ದು, ಕೊಡಗು ಜಿಲ್ಲೆ ಹಾಗೂ ಪಿರಿಯಾಪಟ್ಟಣ, ಹುಣಸೂರು ತಾಲೂಕಿನ ಪದವಿ ಪೂರ್ವ ಕಾಲೇಜುಗಳಿಂದ ಸುಮಾರು ೨೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಡಾ. ಕಾವೇರಿಯಪ್ಪ ಮನವಿ ಮಾಡಿದರು. ಗೋಷ್ಠಿ ಯಲ್ಲಿ ಉಪ ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಡಾ. ಪಿ.ಪಿ. ಸವಿತಾ, ಕಾರ್ಯಕ್ರಮ ಸಂಚಾಲಕ ಯು. ಟಿ. ಪೆಮ್ಮಯ್ಯ, ಹಿರಿಯ ಉಪನ್ಯಾಸಕಿ ಸಿ. ಪಿ. ಸುಜಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಅಭಿಷೇಕ್, ಕಾರ್ಯದರ್ಶಿ ಆಶಿಕ, ಜಂಟಿ ಕಾರ್ಯದರ್ಶಿ ಕೃತಿ ಕಾವೇರಮ್ಮ ಉಪಸ್ಥಿತರಿದ್ದರು.

ಎರಡು ದಿನಗಳವರೆಗೆ ನಡೆಯಲಿರುವ ಕಾವೇರಿಯನ್ಸ್ ಫೆಸ್ಟ್ನಲ್ಲಿ ತಾ. ೩೦ ರಂದು ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ಬಾಕ್ಸ್ ಕ್ರಿಕೆಟ್ ಕ್ರೀಡೆಗಳು ನಡೆಯಲಿವೆ. ತಾ. ೩೧ ರಂದು ಕನ್ನಡ ಭಾವಗೀತೆ ಸಮೂಹ ಗಾಯನ, ಸಮೂಹ ಜನಪದ ನೃತ್ಯ, ಚರ್ಚಾ ಸ್ಪರ್ಧೆ, ನಿಧಿ ಶೋಧ, ರಸಪ್ರಶ್ನೆ ಹಾಗೂ ಗೇಮಿಂಗ್ ಸ್ಪರ್ಧೆಗಳು ನಡೆಯಲಿವೆ.

ಸಮಗ್ರ ಚಾಂಪಿಯನ್ ತಂಡಕ್ಕೆ ರೂ. ೨೫,೦೦೦ ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೧೫,೦೦೦ ಸಾವಿರ ನಗದು ಹಾಗೂ ಟ್ರೋಫಿ, ಮೂರನೇ ಸ್ಥಾನ ಪಡೆಯುವ ತಂಡಕ್ಕೆ ರೂ. ೧೦,೦೦೦ ಸಾವಿರ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ರೂ. ೫೦೦೦ ಸಾವಿರ ಬಹುಮಾನ ಹಾಗೂ ಪ್ರತಿ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ವಿಜೇತರಿಗೆ ವೈಯಕ್ತಿಕ ಟ್ರೋಫಿ ನೀಡಲಾಗುತ್ತದೆ.

ಎಲ್ಲಾ ಸ್ಪರ್ಧೆಗಳಿಗೂ ನೋಂದಣಿ ಉಚಿತವಾಗಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ತಾ. ೨೪ ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹದು. ಹೆಚ್ಚಿನ ಮಾಹಿತಿಗೆ ಮೊ.ಸಂ. ೭೮೯೯೧೪೭೬೨೭, ೯೯೦೦೫೭೯೫೭೯, ೯೮೮೦೩೮೨೮೯೫ಗೆ ಸಂಪರ್ಕಿಸಬಹುದಾಗಿದೆ.