ಮಡಿಕೇರಿ, ಅ. ೧೬ : ಸೈನಿಕ ಶಾಲೆ ಎಂದರೆ ಹಲವು ವಿದ್ಯಾರ್ಥಿಗಳಿಗೆ ಮತ್ತು ಪೋಷಕರ ಪಾಲಿಗೆ ಶಿಕ್ಷಣರಂಗದ ಕನಸಿನ ಮಹಲೇ ಹೌದು. ಅತ್ಯುತ್ತಮ ಗುಣಮಟ್ಟದ, ದೇಶಪ್ರೇಮ ಮೂಡಿಸುವ ಆದ್ಯತೆಯಲ್ಲಿನ ಪಠ್ಯ ಕ್ರಮ, ಶಿಸ್ತಿನ ವಾತಾವರಣ, ಶೈಕ್ಷಣಿಕವಾಗಿ ಮೂಲಸೌಲಭ್ಯ ಇತ್ಯಾಧಿ ಅಂಶಗಳು ಸೈನಿಕ ಶಾಲಾ ಶಿಕ್ಷಣವನ್ನು ಶ್ರೇಷ್ಟವಾಗಿಸಿದೆ.
ಹೀಗಾಗಿಯೇ ಅನೇಕ ಪೋಷಕರು ತಮ್ಮ ಮಕ್ಕಳು ಸೈನಿಕಶಾಲೆಗೆ ಸೇರಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ. ದೇಶರಕ್ಷಣೆಗಾಗಿ ಸೈನ್ಯಾಧಿಕಾರಿಗಳಾಗುತ್ತಾರೆ ಎಂಬ ಮಹದಾಸೆಯನ್ನು ಸಹಜವಾಗಿಯೇ ಹೊಂದಿದ್ದಾರೆ.
ಈ ಮೊದಲು ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಸೈನಿಕ ಶಾಲೆಗಳನ್ನು ಕೆಲವು ವರ್ಷಗಳಿಂದ ಖಾಸಗಿ ನಿರ್ವಹಣೆಗೂ ಒಪ್ಪಿಸಲಾಗಿದ ಎಂಬುದು ಬಹುತೇಕರ ಗಮನದಲ್ಲಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೈನಿಕಶಾಲೆಗಳು ದೇಶವ್ಯಾಪಿ ಕಾರ್ಯಾರಂಭ ಮಾಡಲಿವೆ. ಹೀಗಾಗಿ ಈಗಿನ ಮಕ್ಕಳಿಗೆ ಸೈನಿಕಶಾಲೆ ಸೇರ್ಪಡೆಯಾಗಿ ಅತ್ಯುತ್ತಮ ಶಿಕ್ಷಣ ಪಡೆಯುವ ಕನಸಿನ ಅವಕಾಶ ಮತ್ತಷ್ಟು ನಿಕಟವಾಗುವ ಎಲ್ಲಾ ಸಾಧ್ಯತೆಗಳಿವೆ.
ಪ್ರಸ್ತುತ, ಕೊಡಗಿನ ಕೂಡಿಗೆಯಲ್ಲಿ ರಾಜ್ಯದ ಎರಡನೇ ಸೈನಿಕ ಶಾಲೆ ಕಾರ್ಯನಿರ್ವಹಿಸುತ್ತಿದೆ. ಅಂತೆಯೇ ಕೊಡಗಿನಿಂದ ೧೧೦ ಕಿ.ಮೀ. ದೂರದ ಸರಗೂರು ಗ್ರಾಮದಲ್ಲಿ ಇರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸೈನಿಕಶಾಲೆಯನ್ನು ೩ ವರ್ಷಗಳಿಂದ ವಿವೇಕಾ ಸ್ಕೂಲ್ ಆಫ್ ಎಕ್ಸಲೆನ್ಸ್ ಹೆಸರಿನಲ್ಲಿ ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಬರುತ್ತಿದೆ. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಘಟಕವಾಗಿರುವ ಈ ಸೈನಿಕ ಶಾಲೆಯು. 'ಸೂಕ್ತ ಮಾರ್ಗದರ್ಶನ ಹಾಗೂ ಅಗತ್ಯ ತರಬೇತಿಯನ್ನು ಪಡೆದರೆ ಗ್ರಾಮೀಣ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪರೀಕ್ಷೆ ಬರೆದು ಸೈನಿಕಶಾಲೆಗೆ ಆಯ್ಕೆ ಆಗಬಹುದು. ಭವಿಷ್ಯದಲ್ಲಿ ಬಹಳಷ್ಟು ಅವಕಾಶ ದೊರೆಯಲಿದೆ' ಎನ್ನುವುದು ಈ ಘಟಕದ ಆಶಯವಾಗಿದೆ.
ಪ್ರಸ್ತುತ ಈ ಸೈನಿಕಶಾಲೆಯಲ್ಲಿ ೭೦೦ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾ ಸೌಲಭ್ಯ, ಹಾಸ್ಟೆಲ್ ಸೇರಿದಂತೆ ಮೂಲಸೌಲಭ್ಯಗಳಿವೆ.
ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯವು ೨೦೨೨ರಲ್ಲಿ ಸೈನಿಕ ಶಾಲೆಗಳನ್ನು ಖಾಸಗಿ ವಲಯಕ್ಕೂ ತನ್ನ ಅಧೀನದಲ್ಲಿ ಮತ್ತು ತನ್ನದೇ ಆದ ಗುಣಮಟ್ಟ ಕಾಯ್ದುಕೊಳ್ಳುವಿಕೆಯ ಷರತ್ತಿನಡಿಯಲ್ಲಿ ನಿರ್ವಹಣೆಗೆ ಒಪ್ಪಿಸಲು ಮುಂದಾಯಿತು. ಅಂತೆಯೇ ದೇಶವ್ಯಾಪಿ ೧೦೦ ಸೈನಿಕ ಶಾಲೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಯಿತು. ಸದ್ಯಕ್ಕೆ ಕರ್ನಾಟಕದಲ್ಲಿ ೩ ಸೈನಿಕ ಶಾಲೆಗಳನ್ನು ಪ್ರಾರಂಭಿಸಲಾಯಿತು. ಬಿಜಾಪುರ ಮತ್ತು ಕೂಡಿಗೆಯಲ್ಲಿರುವ ಸೈನಿಕಶಾಲೆ ಸೇರಿದಂತೆ ಹೊಸದಾಗಿ ಪ್ರಾರಂಭವಾದ ೪ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ) ೩ ಶಾಲೆ ಸೇರಿದಂತೆ ರಾಜ್ಯದಲ್ಲಿಗ ೫ ಸೈನಿಕ ಶಾಲೆಗಳಿವೆ. ತಮಿಳುನಾಡಿನಲ್ಲಿ ೨, ಕೇರಳದಲ್ಲಿ ೪, ಆಂಧ್ರ, ತೆಲಂಗಾಣದಲ್ಲಿ ೩ ಸೈನಿಕ ಶಾಲೆಗಳಿವೆ.
ಈ ಮೊದಲು ದಕ್ಷಿಣ ಭಾರತದಲ್ಲಿ ಕೇವಲ ೬ ಸೈನಿಕ ಶಾಲೆಗಳಿದ್ದದ್ದು ರಕ್ಷಣಾ ಇಲಾಖೆಯ ಖಾಸಗಿ ನಿರ್ವಹಣೆಯ ಯೋಜನೆಯಿಂದ ಪ್ರಾರಂಭವಾದ ೮ ಹೊಸ ಸೈನಿಕ ಶಾಲೆಗಳೂ ಸೇರಿದಂತೆ ಪ್ರಸ್ತುತ ೧೪ ಸೈನಿಕ ಶಾಲೆಗಳು ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.
ಮುಂದಿನ ವರ್ಷಗಳಲ್ಲಿ ದೇಶದಾದ್ಯಂತ ಇರುವ ೩೩ ಸೈನಿಕ ಶಾಲೆಗಳಿಗೆ ಸೇರ್ಪಡೆಯಾಗಿ ಹೊಸದ್ದಾಗಿ ೪೫ ಸೈನಿಕ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಅಂದರೆ, ಸೈನಿಕಶಾಲೆ ಸೇರ್ಪಡೆಯಾಗಬೇಕೆಂಬ ಹಂಬಲದ ವಿದ್ಯಾರ್ಥಿಗಳಿಗೆ ಮತ್ತಷ್ಟು ಅವಕಾಶಗಳು ಮುಕ್ತವಾಗಿದೆ.
ಸರಗೂರಿನಲ್ಲಿ ೩ ವರ್ಷಗಳಿಂದ ೨೦೦ ವಿದ್ಯಾರ್ಥಿಗಳು ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ಶೈಕ್ಷಣಿಕವಾಗಿ ಇತರ ಸೈನಿಕ ಶಾಲೆಗಳ ಶಿಕ್ಷಣ ಗುಣಮಟ್ಟಕ್ಕೆ ಸರಿಸಾಟಿಯಾಗುವಂತೆಯೇ ಈ ಶಾಲೆಯಲ್ಲಿಯೂ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಪ್ರತೀ ತಿಂಗಳು ರಕ್ಷಣಾ ಸಚಿವಾಲಯದ ಶಿಕ್ಷಣ ಸಮಿತಿಯಿಂದ ಈ ಶಾಲೆಯ ಗುಣಮಟ್ಟ ಪರಿಶೀಲನೆ ನಡೆಯುತ್ತಲೇ ಇದೆ.
೯ನೇ ತರಗತಿ ಬಳಿಕವೇ ಎನ್ಡಿಎ, ಜೆಇಇ, ನೀಟ್, ಸಿಇಟಿ ಪರೀಕ್ಷಾ ಕೋಚಿಂಗ್ನ್ನು ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ಈ ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗುತ್ತಿದೆ. ಸರ್ಕಾರದ ಅನುದಾನವಿಲ್ಲದೇ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯೇ ಪ್ರಾರಂಭಿಕ
ರೂ. ೨೮ ಕೋಟಿ ವೆಚ್ಚ ಭರಿಸಿ ಸೈನಿಕ ಶಾಲೆ ಪ್ರಾರಂಭಿಸಿದ್ದು ಈವರೆಗೂ ಅಗತ್ಯದ ಎಲ್ಲಾ ವೆಚ್ಚಗಳನ್ನು ಭರಿಸುತ್ತಾ ಬಂದಿದೆ. ಈಗಾಗಲೇ ಸಂಸ್ಥೆಯಿAದ ೭ ಕೋಟಿ ರೂಪಾಯಿ ವೆಚ್ಚ ಮಾಡಿ ಶೈಕ್ಷಣಿಕ ಸವಲತ್ತು ಒದಗಿಸಲಾಗಿದೆ ಎಂದು ಸಂಸ್ಥೆಯ ಶೈಕ್ಷಣಿಕ ವಿಭಾಗದ ನಿರ್ದೇಶಕ ಎಸ್. ಪ್ರವೀಣ್ ಕುಮಾರ್ ಮಾಹಿತಿ ನೀಡಿದರು. ಕೂಡಿಗೆ ಸೈನಿಕ ಶಾಲಾ ಪ್ರಾಂಶುಪಾಲರೇ ಸರಗೂರು ಸೈನಿಕ ಶಾಲೆಯ ಆಡಳಿತ ಮಂಡಳಿಯಲ್ಲಿ ನಾಮನಿರ್ದೇಶಿತ ಸದಸ್ಯರಾಗಿ ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.
ಸಮಾಜಕಲ್ಯಾಣ ಇಲಾಖೆ ವತಿಯಿಂದ ನಿಯೋಜಿತರಾಗುವ ಶಿಕ್ಷಕರಿಗೆ ಸೈನಿಕ ಶಾಲೆಯ ಮಾರ್ಗದರ್ಶಿ ಪ್ರಕಾರ ಉನ್ನತ ದರ್ಜೆಯ ಶೈಕ್ಷಣಿಕ ತರಭೇತಿಯನ್ನು ಗಾಂಧಿ ನಗರದಲ್ಲಿನ ಐಐಟಿಇ ಮತ್ತು ಕೂಡಿಗೆ ಸೈನಿಕ ಶಾಲೆಯಲ್ಲಿ ನೀಡಲಾಗುತ್ತಿದೆ. ಪ್ರಸ್ತುತ ೧೬ ಬೋಧಕರಿದ್ದಾರೆ.
ಪ್ರತೀ ವರ್ಷವೂ ೬ ಮತ್ತು ೯ನೇ ತರಗತಿಗಳಿಗೆ ೮೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯ ಪ್ರಕ್ರಿಯೆಯೂ ಇತರೆಲ್ಲಾ ಸೈನಿಕ ಶಾಲೆಗಳಂತೆಯೇ ಇರಲಿದ್ದು ಕಠಿಣ ಪರೀಕ್ಷಾ ವಿಧಾನವನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಯಾರ ಪ್ರಭಾವವನ್ನೂ ಆಯ್ಕೆ ಸಂದರ್ಭ ಪರಿಗಣಿಸದೇ ವಿದ್ಯಾರ್ಥಿಗಳ ಬುದ್ದಿಮತ್ತೆಯನ್ನೇ ಆದ್ಯತೆಯಾಗಿ ಪರಿಗಣಿಸಲಾಗುತ್ತಿದೆ ಎಂದು ಪ್ರವೀಣ್ ಕುಮಾರ್ ಹೇಳಿದರು. ಸರಗೂರಿನ ಸೈನಿಕ ಶಾಲೆಯಲ್ಲಿ ಡಾ. ಬ್ರಿಗೇಡಿಯರ್ ಆರ್.ಎಸ್. ರಾಜನ್, ವಿಎಸ್ ಎಂ, ಬ್ರಿಗೇಡಿಯರ್ ಪಿ.ಕೆ. ಶರ್ಮಾ, ಏರ್ ಕಮೋಡರ್ ಆರ್.ಎನ್. ಜಯಸಿಂಹ, ಡಾ. ಪ್ಲೇಟ್ ಲೈಫ್ಟಿನೆಂಟ್ ಎಂ.ಎ. ಬಾಲಸುಬ್ರಮಣ್ಯ ಆಡಳಿತ ಮಂಡಳಿಯ ಸಲಹೆಗಾರರಾಗಿದ್ದಾರೆ.
ವರ್ಷದಿಂದ ವರ್ಷಕ್ಕೆ ಸೈನಿಕ ಶಾಲೆಗಳಲ್ಲಿ ಕಲಿಯಲು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅತ್ಯಧಿಕ ಪ್ರಮಾಣದಲ್ಲಿ ಬೇಡಿಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯವು ಅನೇಕ ವರ್ಷಗಳಿಂದ ತನ್ನ ಅಧೀನದಲ್ಲಿಯೇ ಇದ್ದ ಸೈನಿಕ ಶಾಲೆಗಳನ್ನು ಖಾಸಗಿ ಸಹಭಾಗಿತ್ಯದಲ್ಲಿ ನಿರ್ವಹಣೆಗೆ ಅನುಮತಿ ನೀಡಿದ ಪರಿಣಾಮವೇ ದೇಶವ್ಯಾಪಿ ಸೈನಿಕ ಶಾಲೆಗಳ ಕ್ರಾಂತಿ ಪ್ರಾರಂಭವಾಗಿದೆ. ಕೊಡಗಿನಲ್ಲಿಯೂ ಮುಂದಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳು ಸೈನಿಕಶಾಲೆ ಸ್ಥಾಪನೆಗೆ ಮುಂದಾದಲ್ಲಿ ಅಶ್ಚರ್ಯವಿಲ್ಲ.