ವೀರಾಜಪೇಟೆ, ಅ. ೨೧: ವೀರಾಜಪೇಟೆ ಗಾಂಧಿನಗರದ ನಂ. ೫೭೦ನೇ ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಪ್ರಥಮ ಮತ್ತು ೨೦೨೪-೨೫ನೇ ಸಾಲಿನ ಮಹಾಸಭೆ ಗಾಂಧಿನಗರ ಲಯನ್ಸ್ ಕ್ಲಬ್‌ನ ಸಭಾಂಗಣದಲ್ಲಿ ನಡೆಯಿತು.

ಬ್ಯಾಂಕ್‌ನ ಅಧ್ಯಕ್ಷರಾದ ಪಟ್ಟಡ ರೀನಾ ಪ್ರಕಾಶ್ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ೩೮೫ ಮಂದಿ ಸದಸ್ಯಬಲದೊಂದಿಗೆ ಸಂಘ ಮುನ್ನಡೆಯುತ್ತಿದೆ. ಲಕ್ಷದವರೆಗಿನ ಸಾಲಗಳು ಸದಸ್ಯರಿಗೆ ನೀಡಲಾಗಿದ್ದು, ಸದಸ್ಯರು ಸಾಲದ ಕಂತುಗಳನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡುತ್ತಿದ್ದಾರೆ. ಮುಂದೆ ಠೇವಣಿ ಖಾತೆಯ ಸಾಲ, ಪಿಗ್ಮಿ ಖಾತೆ ಮತ್ತು ಸಾಲ, ಎಸ್.ಬಿ. ಖಾತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲು ಮಾಡಲಾಗುತ್ತದೆ. ಬ್ಯಾಂಕ್ ಸದೃಢವಾಗಲು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯ ಬಲವನ್ನು ಹೊಂದಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಪ್ರಯತ್ನ ಮಾಡುತ್ತಿದೆ. ಬ್ಯಾಂಕ್ ಆರಂಭಗೊAಡು ಅಲ್ಪ ಸಮಯದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಶ್ರಮ ಹಾಗೂ ಸದಸ್ಯರ ಸಹಕಾರವಿದೆ. ಸಂಘಗಳ ಉನ್ನತ್ತಿ ಮತ್ತು ಆರ್ಥಿಕವಾಗಿ ಸುಸ್ಥಿತಿಯಲ್ಲಿಡಲು ಸದಸ್ಯರು ಸಹಕಾರ ನೀಡಬೇಕು ಎಂದು ಹೇಳಿದರು.

ಸಂಘದ ನಿರ್ದೇಶಕಿ ಯು.ಕೆ. ಪ್ರೇಮಾವತಿ ವಾರ್ಷಿಕ ವರದಿ ವಾಚನ ಮಾಡಿದರೆ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಟ್ಟಡ ಜಿ. ಪ್ರಕಾಶ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ರಾಜ್ಯ ಸಹಕಾರಿ ಸೌಹಾರ್ದ ಸಂಘದ ಅಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿದರು.

ವೇದಿಕೆಯಲ್ಲಿ ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಎ.ಡಿ. ಗಣಪತಿ, ನಿರ್ದೇಶಕರುಗಳಾದ ಯು.ಕೆ. ಪೊನ್ನಮ್ಮ, ಕೆ.ಎನ್. ಕಾರ್ಯಪ್ಪ, ಕೊಲ್ಲಿರ ಪಿ. ಚೋಂದಮ್ಮ, ಕೆ.ಎನ್. ಕಾವೇರಪ್ಪ, ಬಿ.ಜಿ. ಪ್ರತೀಶ್, ಟಿ.ಎಸ್. ನಾಣಯ್ಯ, ಎಂ.ಎ. ಸಫೀರ, ಯು.ಕೆ. ಪ್ರೇಮಾವತಿ, ವಿ.ಸಿ. ಸುಧಿ, ಬಿ.ಎಂ. ಕೀರ್ತಿ ಗಗನ್ ಗಣಪತಿ ಉಪಸ್ಥಿತರಿದ್ದರು. ಶ್ರೀ ಪಾವನಿ ಸಹಕಾರಿ ಸೌಹಾರ್ದ ಸಂಘ ನಿಯಮಿತ ಬ್ಯಾಂಕ್‌ನ ವ್ಯವಸ್ಥಾಪಕಿ ಎ.ಡಿ. ಗೀತ ಮತ್ತು ಸಿಬ್ಬಂದಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.