ಕಣಿವೆ, ಅ. ೨೦: ಕುಡ್ಲೂರು ಗ್ರಾಮದ ನವಗ್ರಾಮ ಜನವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಅನೇಕ ವರ್ಷಗಳಿಂದಲೂ ಅವ್ಯವಸ್ಥೆಯ ಆಗರವಾಗಿದ್ದರೂ ಕೂಡ ಆಡಳಿತ ವರ್ಗ ಗಮನ ಹರಿಸುತ್ತಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರಾಗಿದೆ. ಕೈಗಾರಿಕಾ ಪ್ರದೇಶದ ಅನೇಕ ಕೈಗಾರಿಕಾ ಘಟಕಗಳಲ್ಲಿ ಕೆಲಸ ಮಾಡಿ ಜೀವನ ನಡೆಸುವ ಬಹುತೇಕ ಮಂದಿ ಇದೇ ನವಗ್ರಾಮದವರಾಗಿದ್ದು ಶ್ರಮಿಕ ವರ್ಗದ ಸಂಚಾರಕ್ಕೆ ರಸ್ತೆ ಸಂಚಕಾರವಾಗಿದೆ. ರಸ್ತೆಯ ಎರಡೂ ಕಡೆಗಳಲ್ಲಿ ಸೂಕ್ತವಾದ ಚರಂಡಿ ಇಲ್ಲದ ಕಾರಣ ಜನವಸತಿಯ ತ್ಯಾಜ್ಯ ನೀರು ಇದೇ ರಸ್ತೆಯಲ್ಲಿ ನಿಂತು ಸೊಳ್ಳೆಗಳ ಆವಾಸಸ್ಥಾನವಾಗಿದೆ. ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ರಾತ್ರಿ ವೇಳೆ ತೆರಳುವ ಪಾದಚಾರಿಗಳು ಗುಂಡಿಗಳ ಕೆಸರ ನೀರಿನೊಳಗೆ ಕಾಲು ಜಾರಿ ಎದ್ದು ಬಿದ್ದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ನಿವಾಸಿಗಳಾದ ಕನಕ, ಭಾಗ್ಯ, ರತ್ನಾವತಿ, ಪದ್ಮಾ, ಗೌರಿ ಮೊದಲಾದವರು ಅಳಲು ತೋಡಿಕೊಂಡರು.ಈ ನವಗ್ರಾಮದಲ್ಲಿ ೧೫೦ ಕ್ಕೂ ಹೆಚ್ಚಿನ ಮನೆಗಳಿದ್ದು ಇದೂವರೆಗೂ ಸರ್ಕಾರದ ಸವಲತ್ತುಗಳು ಇಲ್ಲಿನ ನಿವಾಸಿಗಳಿಗೆ ದೊರಕದಿರುವ ಬಗ್ಗೆ ಪಂಚಾಯಿತಿ ಸದಸ್ಯರಾದ ಕೆ.ಕೆ.ಭೋಗಪ್ಪ, ಕೆ.ಕೆ.ಕೃಷ್ಣ ಮೊದಲಾದವರು ಬೇಸರ ವ್ಯಕ್ತಪಡಿಸುತ್ತಾರೆ. ಕೂಡಲೇ ಶಾಸಕರು ಇತ್ತ ಧಾವಿಸಬೇಕು. ನಾವುಗಳು ಅನುಭವಿಸುತ್ತಿರುವ ನರಕದ ಜೀವನವನ್ನು ಕಂಡು ಸಮಸ್ಯೆಗಳ ಪರಿಹಾರಕ್ಕೆ ಯೋಜನೆ ರೂಪಿಸಬೇಕೆಂದು ಇಲ್ಲಿನ ಮಹಿಳೆಯರು ಒತ್ತಾಯಿಸಿದ್ದಾರೆ.