ಹಬ್ಬಗಳು ಮಾನವನ ಆತ್ಮದ ಕನ್ನಡಿಗಳು. ಪ್ರತಿ ಹಬ್ಬವು ನಮ್ಮೊಳಗಿನ ಬೆಳಕನ್ನು ಮತ್ತೆ ಬೆಳಗುವ ನೆಪ. ದೀಪಾವಳಿ - ಅದು ಕೇವಲ ಮನೆಗಳಲ್ಲಿ ಹಚ್ಚುವ ದೀಪಗಳ ಹಬ್ಬವಲ್ಲ, ಅದು ಹೃದಯದಲ್ಲಿ ಹಚ್ಚುವ ಬೆಳಕಿನ ಹಬ್ಬವೂ ಹೌದು.

ಇಂದು ನಮ್ಮ ಸಮಾಜ ಬೆಳಕಿನ ಅಲಂಕಾರಗಳಿAದ ಮಿನುಗುತ್ತದೆ. ನಗರಗಳ ರಸ್ತೆಗಳು ಹೂವಿನ ಮಾಲೆಗಳಿಂದ, ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ. ಆದರೆ ಈ ಬೆಳಕಿನ ಮಧ್ಯೆ ನಮ್ಮ ಮನಗಳಲ್ಲಿ ಇನ್ನೂ ಕೆಲವೆಡೆ ಕತ್ತಲೆಯ ಕಳೆ ಉಳಿದಿದೆ - ಅದು ಪರಸ್ಪರ ಅಸಹನೆ, ಭಾಷೆಯ ಅಂತರ, ಧರ್ಮದ ವಿಭಜನೆ.

ದೀಪಾವಳಿ ನಮಗೆ ಒಂದು ಸಂದೇಶ ಹೇಳುತ್ತದೆ - ಬೆಳಕನ್ನು ಹಚ್ಚಲು ಕತ್ತಲನ್ನು ಶಪಿಸುವ ಅಗತ್ಯವಿಲ್ಲ; ನಾವು ಒಂದೊAದು ದೀಪ ಹಚ್ಚಿದರೆ ಕತ್ತಲೆ ಸ್ವತಃ ದೂರವಾಗುತ್ತದೆ.

ಇಂದಿನ ಯುಗದಲ್ಲಿ, ನಾವು ವಿಭಿನ್ನ ಭಾಷೆಗಳಲ್ಲಿ ಮಾತನಾಡುತ್ತೇವೆ, ಬೇರೆ ಬೇರೆ ಧರ್ಮಗಳಲ್ಲಿ ಪ್ರಾರ್ಥಿಸುತ್ತೇವೆ, ವಿಭಿನ್ನ ಸಂಸ್ಕೃತಿಗಳಲ್ಲಿ ಬದುಕುತ್ತೇವೆ.

ಆದರೆ ಅಂತಃಕರಣದಲ್ಲಿ ಎಲ್ಲರೂ ಒಂದೇ ಪ್ರಾರ್ಥನೆ ಮಾಡುತ್ತೇವೆ - ಶಾಂತಿ, ಪ್ರೀತಿ, ಸುರಕ್ಷತೆ.

ದೀಪಾವಳಿ ನಮಗೆ ಈ ಏಕತೆಯ ಪಾಠ ಕಲಿಸುತ್ತದೆ. ಹೇಗೆ ದೀಪದ ಜ್ಯೋತಿ ತನ್ನ ಬೆಳಕನ್ನು ಎಲ್ಲರಿಗೂ ಸಮವಾಗಿ ಹಂಚುತ್ತದೆಯೋ, ಹಾಗೆಯೇ ನಾವು ಸಹ ನಮ್ಮ ಹೃದಯದ ದೀಪದ ಜ್ಯೋತಿಯನ್ನು ಎಲ್ಲರಿಗೂ ಹಂಚಬೇಕಾಗಿದೆ.

ಮನೆಯ ಬಾಗಿಲಿಗೆ ಹಚ್ಚಿದ ಒಂದೇ ದೀಪವು ಬರುವ ಅತಿಥಿಗೆ ದಾರಿ ತೋರುತ್ತದೆ.

ಅದೇ ರೀತಿ, ನಾವು ನಮ್ಮೊಳಗಿನ ಕರುಣೆ ಮತ್ತು ಗೌರವದ ಬೆಳಕನ್ನು ಹಚ್ಚಿದರೆ, ಅದು ಸಮಾಜದ ಕತ್ತಲೆಯ ಭಾವನೆಗಳನ್ನು ಹಂತ ಹಂತವಾಗಿ ದೂರಮಾಡುತ್ತದೆ.

ಭಾಷೆಯ ಅಂತರಗಳು ಪ್ರೀತಿಯ ಅರ್ಥವನ್ನು ಕಳೆದುಹೋಗದಿರಲಿ, ಧರ್ಮದ ವಿಭಜನೆ ಮಾನವೀಯತೆಯ ಅಸ್ತಿತ್ವವನ್ನು ಮುಸುಕದಿರಲಿ. ಈ ದೀಪಾವಳಿಯಲ್ಲಿ, ನಾವು ಹೊಸ ಬಟ್ಟೆ ತೊಡೋಣ, ಸಿಹಿ ತಿನ್ನೋಣ, ಮನೆ ಅಲಂಕರಿಸೋಣ - ಆದರೆ ಜೊತೆಗೆ, ನಮ್ಮ ಹೃದಯವನ್ನೂ ಹೊಸದಾಗಿಸೋಣ.

ಒಬ್ಬರ ಭಾಷೆಯ ಮೆಚ್ಚುಗೆ ಹೇಳೋಣ, ಮತ್ತೊಬ್ಬರ ಧರ್ಮದ ಗೌರವ ಮಾಡೋಣ, ಎಲ್ಲರ ಸಂಸ್ಕೃತಿಯಲ್ಲಿ ಸೌಂದರ್ಯ ಕಂಡುಕೊಳ್ಳೋಣ. ದೀಪಾವಳಿ ಅಂದರೆ ಬೆಳಕಿನ ಹಬ್ಬ, ಆದರೆ ಅದು ಒಂದು ಹೃದಯದಿಂದ ಮತ್ತೊಂದು ಹೃದಯಕ್ಕೆ ಬೆಳಕು ಹರಡುವ ಕ್ಷಣವೂ ಹೌದು.

ನಮ್ಮ ಮಾತುಗಳಲ್ಲಿ ಮೃದುತೆ ಇರಲಿ, ನಮ್ಮ ಕಣ್ಣಿನಲ್ಲಿ ದಯೆಯ ಕಿರಣ ಇರಲಿ, ನಮ್ಮ ನಡೆಗಳಲ್ಲಿ ಸಹಜ ಮಾನವೀಯತೆ ಇರಲಿ. ಈ ದೀಪಾವಳಿಯಲ್ಲಿ, ದೀಪಗಳನ್ನು ಹಚ್ಚುವದಷ್ಟೇ ಅಲ್ಲ - ಒಬ್ಬರಿಗೊಬ್ಬರು ಬೆಳಕಾಗೋಣ.

ಅದಾಗೆ, ನಿಜವಾದ ದೀಪಾವಳಿ ನಮ್ಮೊಳಗೆ ಪ್ರಾರಂಭ ವಾಗುತ್ತದೆ.

- ಪವಿ ನಾಟೋಳನ, ಬೆಂಗಳೂರು.