ಆಲೂರು-ಸಿದ್ದಾಪುರ, ಅ. ೧೯: ಸಂಘ-ಸAಸ್ಥೆಗಳ ಮೂಲಕ ಹಮ್ಮಿಕೊಳ್ಳುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಹೆಚ್ಚಾಗಿ ನಡೆಸುವುದರಿಂದ ಆಸ್ಪತ್ರೆಗಳಲ್ಲಿ ರಕ್ತ ಕೊರತೆಯನ್ನು ನೀಗಿಸಬಹುದು ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಅಭಿಪ್ರಾಯಪಟ್ಟರು.

ಅವರು ಸಮೀಪದ ಆಲೂರು-ಸಿದ್ದಾಪುರ ಅರೆಭಾಷೆ ಗೌಡ ಸಮಾಜ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ೭ನೇ ವರ್ಷದ ಸಾರ್ವಜನಿಕ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಕ್ತವನ್ನು ಕೃತಕವಾಗಿ ಮಾಡಲು ಸಾಧ್ಯವಾಗುವುದಿಲ್ಲ. ರೋಗಿಗಳು ಸೇರಿದಂತೆ ಮಹಿಳೆಗೆ ಪ್ರಸವ ಸಂದರ್ಭ, ರಕ್ತಹೀನತೆ ಸಮಸ್ಯೆ ಇರುವವರಿಗೆ ಆಸ್ಪತ್ರೆಗಳಲ್ಲಿ ರಕ್ತ ನೀಡಬೇಕಾಗುತ್ತದೆ. ರಕ್ತದಾನ ಶಿಬಿರಗಳ ಮೂಲಕ ರಕ್ತವನ್ನು ಸಂಗ್ರಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯುವ ಸಮೂಹ ಸೇರಿದಂತೆ ೧೮ ವರ್ಷ ಮೇಲ್ಪಟ್ಟ ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಆಗದಂತೆ ಸಹಕರಿಸುವಂತೆ ಮನವಿ ಮಾಡಿದರು.

ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಮಾತನಾಡಿ, ನಮ್ಮಲ್ಲಿ ಯುವ ಸಮೂಹದವರು ಹೆಚ್ಚಾಗಿದ್ದು ಯುವಕರು ಮುಂದೆ ಬಂದು ರಕ್ತದಾನ ಮಾಡುವುದರಿಂದ ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯನ್ನು ಸಂಪೂರ್ಣವಾಗಿ ನೀಗಿಸಬಹುದು. ಆದರೆ ಇಂದಿನ ಯುವ ಜನಾಂಗ ಮಾದಕ ವಸ್ತುಗಳಿಗೆ ಬಲಿಯಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರಂತ.

ಈ ನಿಟ್ಟಿನಲ್ಲಿ ಯುವಕರನ್ನು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಹೇಳಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಅರೆಭಾಷೆ ಗೌಡ ಸಮಾಜದ ಗೌರವಾಧ್ಯಕ್ಷ ಭಟ್ಯನ ಈರಪ್ಪ, ಕಾರ್ಯದರ್ಶಿ ಕುಯುಮುಡಿ ಜಯಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಹಾಜರಿದ್ದರು.

ರಕ್ತದಾನ ಶಿಬಿರದಲ್ಲಿ ಸಾರ್ವಜನಕರು ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು, ವಿದ್ಯುತ್ ಇಲಾಖೆ ಸಿಬ್ಬಂದಿಗಳು, ಆಲೂರು-ಸಿದ್ದಾಪುರ ಸರಕಾರಿ ಐಟಿಐ ಕೇಂದ್ರದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿದರು.