ಕುಶಾಲನಗರ, ಅ. ೧೯: ಕುಶಾಲನಗರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಿಧಿಕುಂಭ ಸ್ಥಾಪನೆ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಧಾರ್ಮಿಕ ವಿಧಿವಿಧಾನಗಳು, ಹೋಮ ಹವನದ ನಂತರ ಷಡೋದ್ದರ ನೆರವೇರಿಸಿದ ಬಳಿಕ ನಿಧಿಕುಂಭ ಸ್ಥಾಪಿಸಲಾಯಿತು. ಕಲ್ಲಿನಿಂದ ಬಿಂದಿಗೆ ಮಾದರಿ ರಚಿಸಿ ಅದರೊಳಗೆ ಚಿನ್ನ, ಬೆಳ್ಳಿ, ವಜ್ರ, ಮುತ್ತು ರತ್ನಗಳನ್ನಿರಿಸಿ ನಿಧಿ ಕುಂಭ ಸ್ಥಾಪಿಸಲಾಯಿತು. ಶಾಸಕ ಡಾ. ಮಂತರ್ ಗೌಡ ಪೂಜೋತ್ಸವದಲ್ಲಿ ಭಾಗಿಯಾಗಿ ನಿಧಿಕುಂಭ ಸ್ಥಾಪನೆ ಕಾರ್ಯದಲ್ಲಿ ತೊಡಗಿಸಿಕೊಂಡರು. ಜೀರ್ಣೋದ್ಧಾರ ಬಳಿಕ ನಿಧಿಕುಂಭ ಸ್ಥಾಪನೆ ಸ್ಥಳದಲ್ಲಿ ಗರ್ಭಗುಡಿ ನಿರ್ಮಾಣಗೊಳ್ಳಲಿದೆ.

ಗಿರೀಶ್ ಭಟ್ ನೇತೃತ್ವದಲ್ಲಿ ಕೃಷ್ಣಮೂರ್ತಿ ಭಟ್, ಸೋಮಶೇಖರ್ ಭಟ್ ಪೂಜಾ ವಿಧಿ ನೆರವೇರಿಸಿದರು. ಇದೇ ಸಂದರ್ಭ ದಾನಿಗಳಾದ ಡಿ.ಎಸ್. ಜಗದೀಶ್ ದಂಪತಿಯನ್ನು ಶಾಸಕರು ಗೌರವಿಸಿದರು.

ದೇವಾಲಯ ಟ್ರಸ್ಟ್ ವತಿಯಿಂದ ಶಾಸಕ ಡಾ. ಮಂತರ್ ಗೌಡ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ. ಗಣಪತಿ, ಕಾರ್ಯದರ್ಶಿ ಮಹೇಶ್, ಜೀರ್ಣೋದ್ಧಾರ ಸಮಿತಿ ಸಂಚಾಲಕ ವಿ.ಎಸ್.ಆನಂದ ಕುಮಾರ್, ಟ್ರಸ್ಟಿಗಳಾದ ಹೆಚ್.ಟಿ. ವಸಂತ, ಗಿರೀಶ್, ಚಂದ್ರು, ವಿಮಲ್, ಶ್ರೀನಿವಾಸ ರಾವ್ ಸೇರಿದಂತೆ ಭಕ್ತಾದಿಗಳು ಇದ್ದರು.