ಕೂಡಿಗೆ, ಅ. ೧೮: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

ಬಸವನಹಳ್ಳಿಯಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಶಿಬಿರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ರೂ. ೮ ಲಕ್ಷ ವೆಚ್ಚದಲ್ಲಿ ೧೬೦. ಮೀ. ಕಾಂಕ್ರಿಟ್ ರಸ್ತೆ ನಿರ್ಮಾಣ, ಬೊಳ್ಳೂರಿನಲ್ಲಿ ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ. ೫ ಲಕ್ಷ ವೆಚ್ಚದಲ್ಲಿ ಶ್ರೀ ಬಸವೇಶ್ವರ ಚೌಡಮ್ಮ ದೇವಾಲಯ ಮುಂಭಾಗ ೮೦ ಮೀ. ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ಬಸವನಹಳ್ಳಿ ಪ್ರೌಢಶಾಲೆಯಲ್ಲಿ ರೂ ೩೪ ಲಕ್ಷ ವೆಚ್ಚದಲ್ಲಿ ಎರಡು ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯ ಅಭಿವೃದ್ಧಿಯೊಂದಿಗೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ಒತ್ತು ನೀಡುವ ನಿಟ್ಟಿನಲ್ಲಿ ಅಗತ್ಯ ಅನುದಾನ ಒದಗಿಸಲಾಗುತ್ತಿದೆ.

ಗ್ರಾಮ ಪಂಚಾಯಿತಿ ಆದಾಯ ಕ್ರೋಢೀಕರಣ ದೊಂದಿಗೆ ಗ್ರಾಮದಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕಿದೆ. ಬಸವೇಶ್ವರ ಚೌಡಮ್ಮ ದೇವಾಲಯ ಅಭಿವೃದ್ಧಿ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದ ಅವರು, ಲ್ಯಾಂಪ್ಸ್ ಮೂಲಕ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯಿಂದ ಸಂಘದ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಅರಣ್ಯ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥಿತ ಸೌಲಭ್ಯವನ್ನು ಸಂಘ ಒದಗಿಸಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಪ್ರವೀಣ್, ಪಿಡಿಓ ಸುಮೇಶ್ ಸೇರಿದಂತೆ ಸದಸ್ಯರುಗಳು, ದೇವಾಲಯ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ದಾದಪ್ಪ, ಸೇರಿದಂತೆ ದೇವಾಲಯ ಸಮಿತಿ ನಿರ್ದೇಶಕರು, ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಘಟಕದ ಪ್ರಮುಖರು, ಪಕ್ಷದ ಮುಖಂಡರು, ಗ್ರಾಮಸ್ಥರು ಇದ್ದರು.