ಸೋಮವಾರಪೇಟೆ, ಅ. ೧೮: ಇಲ್ಲಿನ ಪಶು ವೈದ್ಯಕೀಯ ಇಲಾಖೆಗೆ ಸೇರಿದ ಆಸ್ಪತ್ರೆಯ ಜಾಗದಲ್ಲಿ ಖಾಸಗಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿರುವ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.
ಸರ್ಕಾರಿ ಇಲಾಖೆಯೊಂದಕ್ಕೆ ಸೇರಿದ ಜಾಗದಲ್ಲಿ, ಅದರಲ್ಲೂ ಪಶು ವೈದ್ಯಾಧಿಕಾರಿಗಳ ಕಣ್‌ಅಳತೆಯಲ್ಲಿಯೇ ಶೆಡ್ ನಿರ್ಮಾಣ ಮಾಡಿಕೊಂಡು ಕಾರ್ಮಿಕರು ವಾಸ್ತವ್ಯ ಹೂಡಿರುವುದು, ಅಧಿಕಾರಿಯ ಬೇಜವಾಬ್ದಾರಿಗೆ ಉದಾಹರಣೆಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಶುವೈದ್ಯಕೀಯ ಇಲಾಖೆಗೆ ಸೇರಿದ ಜಾಗಕ್ಕೆ ಒತ್ತಿಕೊಂಡAತೆ ಖಾಸಗಿ ವ್ಯಕ್ತಿಯೋರ್ವರು ತಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದರ ಕೆಲಸಕ್ಕೆ ಬಂದಿರುವ ಕಾರ್ಮಿಕರಿಗೆ ಪಶು ವೈದ್ಯಕೀಯ ಇಲಾಖೆಗೆ ಸೇರಿದ ಜಾಗದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇಷ್ಟೇ ಅಲ್ಲದೇ ಇಲ್ಲಿನ ಶೆಡ್‌ಗಳಿಗೆ ವಿದ್ಯುತ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ವಿಪರ್ಯಾಸವೆಂದರೆ ಇಲಾಖೆಯ ಆಂಬ್ಯುಲೆನ್ಸ್ ನಿಲುಗಡೆಯಾಗುವ ಶೆಡ್‌ನಲ್ಲೂ ಕೆಲಸಗಾರರಿಗೆ ವಾಸ್ತವ್ಯ ಕಲ್ಪಿಸಲಾಗಿದೆ. ಈಗಾಗಲೇ ಇಲಾಖೆಯ ಜಾಗ ಸಾಕಷ್ಟು ಕಬಳಿಕೆ ಆಗಿದ್ದರೂ ಇರುವ ಜಾಗಕ್ಕೆ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ಪಶು ವೈದ್ಯಾಧಿಕಾರಿ ರಾಜಶೇಖರ್ ಪ್ರತಿಕ್ರಿಯಿಸಿದ್ದು, ಇದು ನಮ್ಮ ಗಮನಕ್ಕೆ ಬಂದಿಲ್ಲ; ಕೂಡಲೇ ಶೆಡ್‌ಗಳನ್ನು ತೆರವು ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.