ಸೋಮವಾರಪೇಟೆ, ಅ. ೧೮: ಪೂಜ್ಯ ಭಾವನೆಯ, ಕೋಟ್ಯಂತರ ಜೀವರಾಶಿಗಳಿಗೆ ಜೀವಜಲ ವಾಗಿರುವ, ದಕ್ಷಿಣ ಭಾರತದ ಪ್ರಮುಖ ನದಿಯಾದ ಕಾವೇರಿಯ ಮೂಲಸ್ಥಾನದ ಪಾವಿತ್ರö್ಯತೆ ಕಾಪಾಡುವುದರೊಂದಿಗೆ, ನದಿಯ ಮಲಿನತೆಯನ್ನು ತಡೆಗಟ್ಟುವುದು ಪ್ರತಿಯೋರ್ವರ ಸಾಮಾಜಿಕ ಜವಾಬ್ದಾರಿಯಾಗಬೇಕು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕ ಹಾಗೂ ಸಮಾಜಸೇವಕ ಹರಪಳ್ಳಿ ಎನ್. ರವೀಂದ್ರ ಹೇಳಿದರು.
ಹರಪಳ್ಳಿ ರವೀಂದ್ರ ಅಭಿಮಾನಿ ಗಳ ಸಂಘದ ವತಿಯಿಂದ ಪಟ್ಟಣದ ಜೇಸಿ ವೇದಿಕೆಯಲ್ಲಿ ಆಯೋಜಿಸಿದ್ದ ಪವಿತ್ರ ಕಾವೇರಿ ತೀರ್ಥ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾವೇರಿ ತನ್ನ ಜೀವಂತಿಕೆಯನ್ನು ನಿನ್ನೆ ದಿನ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಮೂಲಕ ಸಾಬೀತುಪಡಿಸಿದ್ದಾಳೆ. ಉತ್ತರದ ಗಂಗಾನದಿಯ ತೀರ್ಥವನ್ನು ದೇಶ ವಿದೇಶಗಳಲ್ಲಿಯೂ ಪ್ರಾಮುಖ್ಯತೆ ಪಡೆದಿದ್ದರೆ ದಕ್ಷಿಣದಲ್ಲಿ ಕಾವೇರಿ ದೈವ ಸ್ವರೂಪಿಣಿಯಾಗಿದೆ. ನದಿಯ ಉಗಮದ ಮೂಲದಿಂದ ಹಿಡಿದು ಹರಿಯುವ ಸಕಲ ಪ್ರದೇಶದಲ್ಲೂ ಸ್ವಚ್ಚತೆಗೆ ಆದ್ಯತೆ ನೀಡಬೇಕಿದೆ ಎಂದರು.
ನದಿ ನೀರು ಮಲಿನವಾಗದಂತೆ ಕ್ರಮ ಕೈಗೊಳ್ಳಬೇಕು. ನದಿಗೆ ತ್ಯಾಜ್ಯದ ನೀರು ಸೇರದಂತೆ, ತ್ಯಾಜ್ಯ ಎಸೆಯದಂತೆ ಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಜನತೆ ಪ್ರಜ್ಞಾವಂತಿಕೆ ಮೆರೆಯಬೇಕು. ಒಂದು ದಿನ ಕಾವೇರಿ ಹರಿವು ನಿಲ್ಲಿಸಿದರೆ ಕೋಟ್ಯಂತರ ಜೀವರಾಶಿಗಳು ನಾಶವಾಗುತ್ತದೆ. ನದಿಯ ಸಂರಕ್ಷಣೆ ಎಲ್ಲರ ಕರ್ತವ್ಯವಾಗಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿದರು. ವೇದಿಕೆಯಲ್ಲಿ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ಕಸಾಪ ಜಿಲ್ಲಾಧ್ಯಕ್ಷ ಎಸ್.ಡಿ. ವಿಜೇತ್, ಎಐಟಿಯುಸಿ ಅಧ್ಯಕ್ಷ ಹೆಚ್.ಎಂ. ಸೋಮಪ್ಪ, ಕಾಫಿ ಬೆಳೆಗಾರ ಕಾಟ್ನಮನೆ ಗಿರೀಶ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ಮಹಮ್ಮದ್ ಶಫಿ, ಅಪ್ಪು ಅಭಿಮಾನಿ ಬಳಗದ ಅಧ್ಯಕ್ಷ ರವಿಕುಮಾರ್ ಅವರುಗಳು ಇದ್ದರು.
ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಪದಾಧಿಕಾರಿಗಳಾದ ರಾಜಪ್ಪ, ಅಜಯ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ನಂತರ ನೂರಾರು ಮಂದಿ ಸಾರ್ವಜನಿಕ ಭಕ್ತಾದಿಗಳಿಗೆ ಪವಿತ್ರ ಕಾವೇರಿ ತೀರ್ಥವನ್ನು ವಿತರಿಸಲಾಯಿತು.