ಮಡಿಕೇರಿ, ಅ. ೧೭ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯ ೧೬ ನೇ ಆಡಳಿತ ಮಂಡಳಿ ಸಭೆ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಪಾಲ್ಗೊಂಡು ಸಂಸ್ಥೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.
ಆರ್ಥೋಪೆಡಿಕ್ಸ್ ವಿಭಾಗದಲ್ಲಿ ರೋಬೊಟಿಕ್ ಸರ್ಜರಿ ಪ್ರಾರಂಭಿಸಲು ಉಪಕರಣ ಖರೀದಿ, ಸ್ತನ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಪರೀಕ್ಷೆ ನಡೆಸಲು ಮ್ಯಾಮೋಗ್ರಾಪಿ ಖರೀದಿಗೆ ತೀರ್ಮಾನ ಕೈಗೊಳ್ಳಲಾಯಿತು.
ಕಟ್ಟಡ ಕಾಮಗಾರಿ ಪ್ರಗತಿ ಪರಿಶೀಲಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಹಾಗೂ ಖಾಲಿ ಇರುವ ವೈದ್ಯರ ಹುದ್ದೆಯನ್ನು ನೇರ ನೇಮಕಾತಿ ಮುಖೇನ ಭರ್ತಿ ಮಾಡಿಕೊಳ್ಳಲು ಸೇರಿದಂತೆ ಸಂಸ್ಥೆಯ ಅಭಿವೃದ್ಧಿ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಯಿತು.
ಡಾ. ಮಂತರ್ ಗೌಡ ಅವರು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಭಿವೃದ್ಧಿ ಬಗ್ಗೆ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಮೊಹಮ್ಮದ್ ಮೊಹಿಸಿನ್, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ. ವಿಶಾಲ್, ಆರ್. ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ ಸುಜಾತ ರಾಥೋಡ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯ ನಿರ್ದೇಶಕರು ಹಾಗೂ ಡೀನ್ ಡಾ. ಲೋಕೇಶ್ ಎ.ಜೆ., ವೈದ್ಯಕೀಯ ಅಧೀಕ್ಷಕ ಡಾ. ಸೋಮಶೇಖರ್, ಆಕುಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.